ಬೆಳ್ತಂಗಡಿ; ಲಾಯಿಲ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮ ಸಭೆ ಗ್ರಾಮ ಪಂಚಾಯತು ಸಭಾಭವನದಲ್ಲಿ ಎ 22 ಶುಕ್ರವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಆಶಾ ಸಲ್ದಾನ ವಹಿಸಿದ್ದರು.
ಸಭೆಯಲ್ಲಿ ಗ್ರಾಮಪಂಚಾಯತಿನಿಂದ ನಿವೇಶನಕ್ಕೆ ಮಂಜೂರಾಗಿರುವ ಜಾಗದಲ್ಲಿ ಮರಗಳಿದ್ದು ಅದನ್ನು ತೆರವುಗೊಳಿಸದಿರುವುದರಿಂದ ನಿವೇಶನ ಹಂಚಿಕೆಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾ.ಪಂ ಉಪಾದ್ಯಕ್ಷ ಗಣೇಶ್ ಗಮನ ಸೆಳೆದರು ಈ ಬಗ್ಗೆ ಅದಷ್ಟು ಶೀಘ್ರದಲ್ಲಿ ತೆರವು ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಅಂಕಾಜೆ ಬಳಿ ಗುಡ್ಡ ಕುಸಿತಗೊಂಡ ಜಾಗದಲ್ಲಿ ಮರಗಳು ರಸ್ತೆಗೆ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದ್ದು ಇದನ್ನೂ ತೆರವು ಮಾಡಬೇಕು ಎಂಬ ಬಗ್ಗೆ ಬಂದ್ದ ದೂರಿಗೆ ತಕ್ಷಣ ಮರಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಮೆಸ್ಕಾಂ ಇಲಾಖೆಯ ಕಾರ್ಯ ನಿರ್ವಹಣೆಯ ಬಗ್ಗೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ವಿದ್ಯುತ್ ಲೈನ್ ಗಳು ಜೋತಾಡುತ್ತಾ ಕೆಳಗೆ ಬಂದಿದ್ದು ಕೈಗೆ ತಾಗುವ ಸ್ಥಿತಿಯಲ್ಲಿದೆ ಅದಲ್ಲದೇ ಹಳೆಯ ತಂತಿಗಳು ತುಕ್ಕು ಹಿಡಿದಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ ಬದಲಾವಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪ್ರಸಾದ್ ಶೆಟ್ಟಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಕಳೆದ ಹಲವು ತಿಂಗಳುಗಳಿಂದ ಈ ಬಗ್ಗೆ ಹೇಳುತ್ತಿದ್ದರೂ ಮೆಸ್ಕಾಂ ಇಲಾಖೆಯವರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶೇಖರ ಲಾಯಿಲ ಹಾಗೂ ಇತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕ್ರಮ ಕೈಗೊಂಡು ತುರ್ತಾಗಿ ಆಗಬೇಕಾಗಿರುವುದನ್ನು ಮಾಡುವುದಾಗಿ ಇಲಾಖೆಯವರು ಭರವಸೆ ನೀಡಿದರು.
ಲಾಯಿಲದಲ್ಲಿ ನಿವೇಶನಗಳನ್ನು ಪಡೆದವರು ಅಲ್ಲಿ ಮನೆ ಕಟ್ಟದೆ ಅದನ್ನು ಮಾರಾಟ ಮಾಡುವ ಕಾರ್ಯ ಮಾಡುತ್ತಿದ್ದಾರೆ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಶೇಖರ ಲಾಯಿಲ ಒತ್ತಾಯಿಸಿದರು. ಪಡ್ಲಾಡಿ ನೇತಾಜಿ ಬಡಾವಣೆಯಲ್ಲಿ ಪಂಚಾಯತಿನಿಂದ ನಿವೇಶನ ಪಡೆದವರಲ್ಲಿ ಹೆಚ್ಚಿನವರು ಈಗ ಅಲ್ಲಿಲ್ಲ ಇದೀಗ ನಿವೇಶನಗಳನ್ನು ಕಾನೂನು ಮೀರಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋ ಕಳ್ಳರ ಹಾವಳಿ ಹೆಚ್ಚುತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅರವಿಂದ ಶೆಟ್ಟಿ ಗ್ರಾಮಸ್ಥರ ಪರವಾಗಿ ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿಗಳನ್ನು ನೀಡಿದರು
ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿಯಾಗಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ತಾರಕೇಸರಿ,ಅಭಿವೃದ್ಧಿ ಅಧಿಕಾರಿ ಪಿ.ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಯಶೋಧರ ಶೆಟ್ಟಿ , ಸದಸ್ಯರುಗಳು, ಸಿಬ್ಬಂದಿಗಳು , ಆರೋಗ್ಯ ಸಹಾಯಕಿಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.