ಹೇಮಾವತಿ ವೀ. ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪದವಿ: ಶಿಕ್ಷಣ, ಸಮಾಜ ಸೇವಾ ಕ್ಷೇತ್ರದ ಸೇವೆಗಾಗಿ ಮಂಗಳೂರು ವಿ.ವಿ.ಯಿಂದ ಗೌರವ: ಎ.23ರಂದು ಶನಿವಾರ ನಡೆಯುವ 40ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ

 

 

ಉಜಿರೆ: ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಅಮೂಲ್ಯ ಸೇವೆಗಾಗಿ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ.
ನಾಳೆ ಶನಿವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುವ 40 ನೆ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು.
ಹೇಮಾವತಿ ವೀ. ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಪ್ರೋತ್ಸಾಹ ನೀಡಿದ್ದಾರೆ.
ಕನ್ಯಾಕುಮಾರಿ ಯುವತಿ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸ್ಥಳೀಯ ಯುವತಿಯರಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನಿರಂತರ ಮಾರ್ಗದರ್ಶನ, ಪ್ರೇರಣೆ ನೀಡುತ್ತಿದ್ದಾರೆ.
ಇವರ ನೇತೃತ್ವದಲ್ಲಿ ಕಾರ್ಕಳದಲ್ಲಿ ವಿದ್ಯಾರ್ಥಿನಿಯರಿಗಾಗಿ ಬಾಹುಬಲಿ ಶ್ರಾವಿಕಾಶ್ರಮ ನಡೆಸಲ್ಪಡುತ್ತಿದೆ.
ಮಂಜುವಾಣಿ ಮಾಸಪತ್ರಿಕೆಯಲ್ಲಿ ಪ್ರಕಟವಾಗುವ “ಮಗಳಿಗೊಂದು ಪತ್ರ” ಮತ್ತು ನಿರಂತರ ಮಾಸಿಕದಲ್ಲಿ “ಗೆಳತಿ” ಅಂಕಣ, ಬರಹಗಳು ಸಾರ್ಥಕ ಬದುಕಿಗೆ ಉಪಯುಕ್ತ ಸಂದೇಶ ನೀಡುತ್ತವೆ. ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ಅನುಪಮ ಸೇವೆ ಮಾಡುತ್ತಿದ್ದಾರೆ.
ಉತ್ತಮ ವಾಗ್ಮಿ ಹಾಗೂ ಕವಯಿತ್ರಿಯಾಗಿಯೂ ಅವರು ಚಿರಪರಿಚಿತರಾಗಿದ್ದಾರೆ.

error: Content is protected !!