ಬೆಳ್ತಂಗಡಿ:ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರ ವಿರುದ್ಧ ವೈಯಕ್ತಿಕ ದ್ವೇಷ ಸಾಧನೆಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಕೇಸ್ ದಾಖಲಿಸಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾದುದು. ಇದು ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ ಕಟುವಾಗಿ ಟೀಕಿಸಿದ್ದಾರೆ. ಅವರು ಬೆಳ್ತಂಗಡಿಯಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ಕಲ್ಮಂಜ ಗ್ರಾಮದಲ್ಲಿ ಮರಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾರವರು ಧಾಳಿ ನಡೆಸಿ ಕೇಸ್ ದಾಖಲಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ದೂರದ ಬೀದರ್ ಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಅವರಿಗೆ ಶಿಫಾರಸು ಮಾಡಿದ್ದರು.ಅದರೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ನ್ಯಾಯ ಸಮ್ಮತವಲ್ಲದ ವರ್ಗಾವಣೆ ಎಂದು ವರ್ಗಾವಣೆಯನ್ನು ರದ್ದು ಪಡಿಸಿತ್ತು ಇದನ್ನು ಸಹಿಸದ ಶಾಸಕರ ಸೂಚನೆಯಂತೆ ಬಿಜೆಪಿ ಎಸ್ ಸಿ ಮೋರ್ಚಾ ಹಾಗೂ ಪ್ರಮುಖ ನಾಯಕರುಗಳು ಸೇರಿ ಹೃದಯಾಘಾತದಿಂದ ನಿಧನರಾದ ಬದ್ಯಾರ್ ಸಮೀಪದ ರಾಮನಾಯ್ಕ ಅವರ ಮೃತದೇಹವನ್ನು ಬೆಳ್ತಂಗಡಿ ಪೋಲಿಸ್ ಠಾಣೆಯ ಮುಂದೆ ಯಾವುದೇ ಅನುಮತಿ ಇಲ್ಲದೆ ಇಟ್ಟು ಪ್ರತಿಭಟನೆ ನಡೆಸಿದಲ್ಲದೆ ಇದೀಗ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಪ್ರಿಲ್ 7 ರಂದು ಜಾತಿ ನಿಂದನೆ ಕೇಸ್ ದಾಖಲಿಸಿರುವುದು ಯಾವ ನ್ಯಾಯ ? ಇದು ದಲಿತ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ದಲಿತ ದೌರ್ಜನ್ಯ ಕಾಯ್ದೆಯಡಿ ಈ ರೀತಿಯಾಗಿ ದ್ವೇಷ ಸಾಧನೆಗಾಗಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,