ಸಾಕ್ಷಿ ಸಮೇತ ಅಣೆಪ್ರಮಾಣಕ್ಕೆ ಬನ್ನಿ: ಮೃತ ದಿನೇಶ್ ಪತ್ನಿ ಹಾಗೂ ತಾಯಿಯಿಂದ ಸವಾಲು ಹಲ್ಲೆ ನಡೆಸಿದ್ದರಿಂದಲೇ ಸಾವು ಸಂಭವಿಸಿದೆ

 

 

 

ಬೆಳ್ತಂಗಡಿ: ಗಂಡನನ್ನು ಮತ್ತು ಅಜ್ಜಿಯನ್ನು ನಾವು ಮನೆಯಿಂದ ಹೊರಗೆ ಹಾಕಿದಾಗ , ಅವರಿಗೆ ಭಜರಂಗದಳದ ಭಾಸ್ಕರ ಧರ್ಮಸ್ಥಳ ಆಶ್ರಯ ನೀಡಿದ್ದೆನೆ ಎಂದಿದ್ದಾರೆ , ಆಸ್ಪತ್ರೆಯಲ್ಲಿ ನನ್ನ ಗಂಡ ಮರದಿಂದ ಬಿದ್ದು ಗಾಯಗೊಂಡಿರುವುದಾಗಿ ನಾನು ಹೇಳಿಕೆ ನೀಡಿದ್ದೇನೆ ಎಂದು ಹೇಳುತ್ತಿರುವ ಬಗ್ಗೆ ಮೊದಲು ಸಾಕ್ಷಿ ಸಮೇತ ಆಣೆ ಪ್ರಮಾಣಕ್ಕೆ ಬರಲಿ ಎಂದು ಮೃತ ದಿನೇಶ್ ಪತ್ನಿ ಕವಿತಾ ದಿನೇಶ್ ಸವಾಲು ಹಾಕಿದರು.

ಅವರು ಬೆಳ್ತಂಗಡಿ ಜಮಿಯಾತುಲ್ ಫಲಾಹ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇಡೀ ಘಟನೆಯನ್ನು ದಾರಿ ತಪ್ಪಿಸಿ , ಅನುಕಂಪ ಪಡೆಯಲು ನಮ್ಮ ಕುಟುಂಬದ ಮೇಲೆ ಅಪಪ್ರಚಾರ ನಡೆಸಿ ನಮ್ಮನ್ನು ಮತ್ತಷ್ಟು ಕುಗ್ಗಿಸಲಾಗುತ್ತಿದೆ ಎಂದರು.

ನನ್ನ ಗಂಡನ ಮೇಲೆ ಪೆಬ್ರವರಿ 23 ರಂದು ಭಾಸ್ಕರ ಧರ್ಮಸ್ಥಳನ ಸಹೋದರ ಕೃಷ್ಣ ಯಾನೇ ಕಿಟ್ಟ ಎಂಬಾತ ಸಾರ್ವಜನಿಕ ಪ್ರದೇಶದಲ್ಲಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾನೆ. ಪೆಬ್ರವರಿ 24 ರಂದು ಗಂಭೀರ ಗಾಯಗೊಂಡ ದಿನೇಶ್ ಅವರನ್ನು ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೊಳಪಡಿಸಿದಾಗ ಯಾವುದೋ ಬಲವಾದ ಪೆಟ್ಟು ಹೊಟ್ಟೆಗೆ ಬಿದ್ದು ಲಿವರ್ ಹಾಗೂ ಕರುಳು ಗಾಯಗೊಂಡು ರಕ್ತ ಸೋರುವಿಕೆಯಿಂದ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನನ್ನನ್ನು ಹೊರಗೆ ನಿಲ್ಲಿಸಿ ಆರೋಪಿ ಕೃಷ್ಣನೇ ಒಳರೋಗಿಯಾಗಿ ದಾಖಲು ಮಾಡಿದ್ದಾರೆ. ಪೆಬ್ರವರಿ 25 ರಂದು ಬೆಳಗ್ಗೆ 2.30 ರ ಸುಮಾರು ನಿಧನರಾದ ಸುದ್ದಿ ತಿಳಿದು ಕೃಷ್ಣ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ತಪ್ಪು ಮಾಡದಿದ್ದರೆ ಆ ನಡು ರಾತ್ರಿ ಪೋನ್ ಸ್ವೀಚ್ ಆಫ್ ಮಾಡಿ ತಪ್ಪಿಸಿಕೊಳ್ಳುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ನಾನು ಆಸ್ಪತ್ರೆ ಒಳಗೆ ಹೋಗದೆ ವೈದ್ಯರಿಗೆ ಹೇಳಿಕೆ ಕೊಡಲು ಹೇಗೆ ಸಾಧ್ಯ ? ಕೃಷ್ಣ ಅವರು ವೈದ್ಯರಿಗೆ ನೀಡಿದ ಹೇಳಿಕೆಯನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ. ಕೃಷ್ಣ ಅವರ ಪತ್ನಿ ನನಗೆ ಕರೆ ಮಾಡಿ ನನ್ನ ಗಂಡ ಕೃಷ್ಣ ಅವರು ಹಲ್ಲೆ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಬೇಡ , ದಿನೇಶ್ ವಿಪರೀತ ಕುಡಿಯುವ ಚಟದಿಂದ ಆತನ ಲಿವರ್ ಸಮಸ್ಯೆಯಾಗಿದೆ ಎಂದು ಹೇಳುವಂತೆ ಪೋನ್ ಮಾಡಿ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೃಷ್ಣ ತಪ್ಪು ಮಾಡದಿದ್ದರೆ ಮಧ್ಯರಾತ್ರಿ ನನ್ನ ಸೊಸೆಯನ್ನು ಬಿಟ್ಟು ಬರುವ ಅಗತ್ಯ ಏನಿತ್ತು ಎಂದು ದಿನೇಶ್ ಅವರ ತಾಯಿ ಪದ್ಮಾವತಿ ಪ್ರಶ್ನಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು.

error: Content is protected !!