ಅನುದಾನ ತರಿಸುವ ರಾಜಕೀಯ ಇಚ್ಛಾಶಕ್ತಿಯೇ ಸಾರ್ಥಕತೆಯ ರಾಜಕಾರಣ: ಶಾಸಕ ಹರೀಶ್ ಪೂಂಜ ಕೂಕ್ರಬೆಟ್ಟು ಸ.ಹಿ.ಪ್ರಾ. ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

 

 

ವೇಣೂರು: ರಾಜಕಾರಣ ಅಂದರೆ ಕೇವಲ ಪಕ್ಷ ರಾಜಕಾರಣ ಅಲ್ಲ. ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಸರಕಾರದ ಸೌಲಭ್ಯಗಳನ್ನು ನಮ್ಮೂರಿಗೆ ಬೇಕು ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡು ಅನುದಾನ ತರಿಸುವ ರಾಜಕೀಯ ಇಚ್ಛಾಶಕ್ತಿಯೇ ಸಾರ್ಥಕತೆಯ ರಾಜಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ರೂ. 92 ಲಕ್ಷ ಮೊತ್ತದ ಅನುದಾನದಲ್ಲಿ ನಿರ್ಮಾಣವಾಗಲಿರುವ ಮರೋಡಿ ಗ್ರಾಮದ ಕೂಕ್ರಬೆಟ್ಟು ಸ.ಹಿ.ಪ್ರಾ. ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು, ಸ್ಥಳೀಯ ನಾಲ್ಕೈದು ಗ್ರಾಮಗಳಿಗೆ ಪೂರಕವಾಗಿ ಈ ಶಾಲೆ ಬೆಳೆದು ನಿಂತಿದೆ. ಇಲ್ಲಿಯ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಬಳಿಕ ಮರೋಡಿ ಗ್ರಾಮದ ಚಿತ್ರಣ ಬದಲಾಗಿದೆ.
ಸವಾಲು ಮತ್ತು ಪ್ರತಿಜ್ಞೆಯ ಮೂಲಕ ಇಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೀಯ ಹೆಚ್ಚಳ ಮಾಡಿರುವ ನಿಮ್ಮ ಶ್ರಮಕ್ಕೆ ದೇವರ ಇಚ್ಚೆಯಂತೆ ಸವಲತ್ತು ದೊರಕಿದೆ. ಕೂಕ್ರಬೆಟ್ಟು ಶಾಲೆಯ ಬೆಳವಣಿಗೆಯಲ್ಲಿ ಇಲ್ಲಿಯ ಶಿಕ್ಷಕರು, ಸಮಿತಿಯವರ ಜತೆ ಪ್ರಕಾಶ್ ಅಂಚನ್‌ರವರ ಶ್ರಮ ಶ್ಲಾಘನೀಯ.ಮೌಲ್ಯಧಾರಿತ, ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರು ಇಲ್ಲಿದ್ದಾರೆ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತೇನೆ ಎಂದರು.

 

ಸರಕಾರಿ ಶಾಲೆ ಉಳಿಸಿ ಬೆಳೆಸಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರು ಮಾತನಾಡಿ, ಸುಧೀರ್ಘ ಅವಿರತ ಶ್ರಮದ ಫಲವಾಗಿ ಕೂಕ್ರಬೆಟ್ಟು ಶಾಲೆಗೆ ಕ್ರಾಂತಿಕಾರಿ ಬದಲಾವಣೆ ಲಭಿಸಿದೆ. ಜೀರ್ಣೋದ್ಧಾರಗೊಂಡ ದೇವಸ್ಥಾನದ ಗರ್ಭಗುಡಿಯ ಒಳಗೆ ದೇವರನ್ನು ಕಂಡಂತೆ ನೂತನ ಶಾಲೆಯ ತರಗತಿಗಳಲ್ಲಿ ಶೀಘ್ರ ಮಕ್ಕಳನ್ನು ಕಾಣುವಂತಾಗಲಿ ಎಂದರು.

 

ಕೂಕ್ರಬೆಟ್ಟು ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಾಸ್ತಾವಿಸಿ, 2019ರಲ್ಲಿ ಶಾಲೆಯಲ್ಲಿ ಕೇವಲ 16 ಮಕ್ಕಳಿದ್ದು, ಮುಚ್ಚುವ ಹಂತಕ್ಕೆ ತಲುಪಿತ್ತು. ಇದೀಗ ಎಲ್ಲರ ಪ್ರಯತ್ನದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ 122ಕ್ಕೆ ಏರಿಕೆ ಆಗಿದೆ. ಶಾಲೆಗೆ ಅಗತ್ಯವಿದ್ದ ಕಾರಣ ನಮ್ಮ ಶ್ರಮವನ್ನು ಮೆಚ್ಚಿ ಶಾಸಕರು ಅನುದಾನ ಮಂಜೂರುಗೊಳಿಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಹೇಮರಾಜ ಕೆ. ಬೆಳ್ಳಿಬೀಡು, ಮರೋಡಿ ಗ್ರಾ.ಪಂ. ಅಧ್ಯಕ್ಷೆ ಪದ್ಮಶ್ರೀ ಜೈನ್, ನಾರಾವಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ ಎಸ್., ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯಶೋಧರ ಬಂಗೇರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ಪತ್ರಕರ್ತ ಪ್ರದೀಶ್ ಮರೋಡಿ, ಎಸ್‌ಡಿಎಂಸಿ ಉಪಾಧ್ಯಕ್ಷ ಯಶೋಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನ

ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಶಾಲೆಯ ಬೆಳವಣಿಗೆಗೆ ಕಾರಣಿಕರ್ತರಾದ ಪ್ರಕಾಶ್ ಅಂಚನ್ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸುಫಲ ಸನ್ಮಾನ ಪತ್ರವಾಚಿಸಿದರು.
ಜಯಂತ್ ಕೋಟ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿಯರಾದ ಶುಭಷಿನಿ ಮತ್ತು ಹರ್ಷಲ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ವಂದಿಸಿದರು.

error: Content is protected !!