ಕಟ್ಟಿಗೆ ಸಂಗ್ರಹ ‌ಸಂದರ್ಭ ಮಾನಭಂಗಕ್ಕೆ ಯತ್ನ, ಕೊಲೆ ಬೆದರಿಕೆ: ಮಹಿಳೆಯಿಂದ ದೂರು

 

 

 

ಬೆಳ್ತಂಗಡಿ: ಕಟ್ಟಿಗೆ ತರಲೆಂದು ಗುಡ್ಡಕ್ಕೆ ಹೋಗಿದ್ದ ಸಂದರ್ಭದಲ್ಲಿ ಯುವಕನೊಬ್ಬ ಕತ್ತಿ ಕೇಳುವ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಇಂದಬೆಟ್ಟು ಗ್ರಾಮದಲ್ಲಿ ನಡೆದಿದೆ.
ಇಂದಬೆಟ್ಟು ಗ್ರಾಮದ ಮಹಿಳೆಯೊಬ್ಬರು ಕಟ್ಟಿಗೆ ತರಲೆಂದು ಮನೆ ಸಮೀಪದ ಗುಡ್ಡಕ್ಕೆ ಫೆ. 22ರಂದು ಸಂಜೆ ತೆರಳಿದ್ದು ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿ ಸಂತೋಷ್ ಎಂಬಾತ ಕತ್ತಿಯನ್ನು ಮಹಿಳೆಯಿಂದ ಪಡೆದು ಅದನ್ನು ದೂರ ಬಿಸಾಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಈ ವೇಳೆ ಮಹಿಳೆ ಆರೋಪಿಯನ್ನು ದೂರ ತಳ್ಳಿ, ತನ್ನನ್ನು ರಕ್ಷಿಸುವಂತೆ ಬೊಬ್ಬೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಹಿಳೆಯ ಗಂಡ ಬರುವುದನ್ನು ಗಮನಿಸಿದ ಯುವಕ ನಡೆದ ಘಟನೆಯನ್ನು ಯಾರಲ್ಲಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಓಡಿಹೋಗಿದ್ದಾನೆ ಎಂದು ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
ಈ ಬಗ್ಗೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!