ಮಂಗಳೂರು : ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ ಹಿನ್ನೆಲೆ ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಫೆ.14 ಇಂದಿನಿಂದ ಬೆಳಗ್ಗೆ 6 ರಿಂದ 19ರ ಸಂಜೆ 6ರವರೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತಲಿನ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಅದರಂತೆ ನಿರ್ಬಂಧಕಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗು, ಪದ್ಯಗಳನ್ನು ಹಾಡುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಹಾಗೂ ಚಿತ್ರಗಳ ಮೂಲಕ ಪ್ರದರ್ಶನ ಪ್ರಸಾರ ಮಾಡುವುದು, ಪ್ರಕಟಣಾ ಪತ್ರಿಕೆಗಳ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ.ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತಾ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗಲು ಪ್ರೇರೇಪಿಸುವ ಕಾರ್ಯಗಳನ್ನು ನಿಷೇಧಿಸಲಾಗಿದೆ. ಐವರು ಹಾಗೂ ಅದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಸೇರುವುದನ್ನು ನಿಷೇಧಿಸಲಾಗಿದೆ.
ಮಾರಕಾಯುಧ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.ಪಟಾಕಿಗಳನ್ನು ಸಿಡಿಸುವುದು, ಯಾವುದೇ ಹಾನಿಕಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯ ಅಥವಾ ಅವರ ಮೃತದೇಹ , ಆಕೃತಿಗಳ, ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ.
.ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ ಸಿಬ್ಬಂದಿ ವಿರುದ್ಧ ನಿಂದಿಸುವಂತಹ ಅವಹೇಳನಕಾರಿಯಾದಂತಹ ಯಾವುದೇ ಘೋಷಣೆಗಳು, ಭಾಷಣಗಳು, ಪ್ರಕಟಣೆಗಳು ಅವಾಚ್ಯ ಶಬ್ದಗಳಿಂದ ಕೂಡಿದ ಪ್ರಚೋದನಾಕಾರಿ ಭಾಷಣ, ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ. ಜೊತೆಗೆ ಯಾವುದೇ ಜಾತಿ, ಧರ್ಮ, ಕೋಮು ಭಾವನೆಗೆ ಧಕ್ಕೆ ಉಂಟುಮಾಡುವ ವರ್ತನೆಗಳನ್ನು ನಿಷೇಧಿಸಲಾಗಿದೆ.
ನಿಷೇಧಾಜ್ಙೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರ್ಕಾರದ ಆದೇಶದಂತೆ ನಡೆಯುವ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.