ಬೆಳ್ತಂಗಡಿ: ಬಸದಿಗಳು ಸಮವಸರಣದ ಪ್ರತೀಕವಾಗಿದ್ದು ಬಸದಿಯಲ್ಲಿರುವ ಜಿನಬಿಂಬಗಳು ಅಮೂಲ್ಯವಾಗಿದ್ದು ಬೆಲೆಕಟ್ಟಲು ಸಾಧ್ಯವಿಲ್ಲ. ಬಸದಿಗಳ ಸಂರಕ್ಷಣೆ ಮತ್ತು ಧರ್ಮ ಜಾಗೃತಿಗೆ ಯುವಜನತೆ ದೃಢಸಂಕಲ್ಪದೊಂದಿಗೆ ಪಣತೊಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಭಾನುವಾರ ಅಳದಂಗಡಿಯಲ್ಲಿ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಹಾಗೂ ಪಂಚಕಲ್ಯಾಣದ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಜೈನಕಾಶಿ ಮೂಡಬಿದ್ರೆಯಲ್ಲಿ ಗುರುಬಸದಿಯಿಂದ ಕಳವಾದ ಅಮೂಲ್ಯ ಜಿನಬಿಂಬಗಳು ಸರ್ಕಾರ ಮತ್ತು ಸಮಾಜದ ಸಹಕಾರದಿಂದ ರಾಜಸ್ಥಾನದಲ್ಲಿ ಪತ್ತೆಯಾಗಿದೆ. ಈಗಲೂ ಅಲ್ಲಲ್ಲಿ ಮೂರ್ತಿಗಳ ಕಳವು ಆಗುತ್ತಿರುವುದು ವಿಷಾದನೀಯವಾಗಿದೆ ಎಂದು ಅವರು ಹೇಳಿದರು.
ಯುವಜನತೆ ತಮ್ಮ ಶಕ್ತಿ, ಸಾಮಥ್ರ್ಯ ಮತ್ತು ಸಂಪತ್ತನ್ನು ಧರ್ಮದ ರಕ್ಷಣೆಗಾಗಿ ಹಾಗೂ ಸಮಾಜ ಸೇವೆಗಾಗಿ ಸದ್ವಿನಿಯೋಗ ಮಾಡಬೇಕು ಎಂದು ಅವರು ಹೇಳಿದರು.
ಸಮ್ಯಕ್ ದರ್ಶನ(ಧಾರ್ಮಿಕ ತತ್ವಗಳಲ್ಲಿ ನಂಬಿಕೆ) ಸಮ್ಯಕ್ ಜ್ಞಾನ (ತಿಳುವಳಿಕೆ) ಮತ್ತು ಸಮ್ಯಕ್ ಚಾರಿತ್ರ್ಯ (ತತ್ವಗಳ ಆಚರಣೆ) – ಇವುಗಳನ್ನು ಜೈನಧರ್ಮದ ತ್ರೈರತ್ನಗಳು ಎನ್ನುತ್ತಾರೆ. ಇವುಗಳ ಪಾಲನೆಯಿಂದ ಬದುಕಿನ ಅಂತಿಮ ಗುರಿಯಾದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ. ಜೈನರ ಪವಿತ್ರ ಆಚಾರ, ವಿಚಾರಗಳಿಂದಾಗಿ ಜೈನರಿಗೆ ಸಮಾಜದಲ್ಲಿ ಅಪಾರ ಗೌರವ, ಮನ್ನಣೆ ಇದೆ.
ದಿಗಂಬರ ಮುನಿಗಳು ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣಕ್ಕಾಗಿ ವಿಹಾರ ಮಾಡುತ್ತಾರೆ. ಅವರು ನಡೆದಾಡುವ ಸಮವಸರಣದ ಪ್ರತೀಕವಾಗಿದ್ದು, ಮಂಗಳ ಪ್ರವಚನದ ಮೂಲಕ ಧರ್ಮ ಜಾಗೃತಿಯೊಂದಿಗೆ ಧರ್ಮಪ್ರಭಾವನೆ ಮಾಡುತ್ತಾರೆ ಎಂದು ಹೇಳಿದರು. ಜೈನೇತರರು ಕೂಡಾ ಮುನಿಗಳ ಮಂಗಲ ಪ್ರವಚನದಿಂದ ಪ್ರಭಾವಿತರಾಗಿ ಜೈನ ತತ್ವಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು, ಪೂಜ್ಯ ಅಮರಕೀರ್ತಿ ಮುನಿಮಹಾರಾಜರು, ಪೂಜ್ಯ ಪ್ರಸಂಗಸಾಗರ ಮುನಿ ಮಹಾರಾಜರು, ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರು ಶುಭಾಶೀರ್ವಾದ ನೀಡಿದರು.
ಬಸದಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ಮುಖ ವಸ್ತ್ರ ಉದ್ಘಾಟನೆ, ನಾಂದಿಮಂಗಲ ವಿಧಾನ, ವಾಸ್ತು ಪೂಜೆ, ನವಗ್ರಹ ಮಹಾಶಾಂತಿ ನಡೆಯಿತು.
ವಿಶೇಷ ದಾನಿಗಳಾದ ಸುರೇಶ ತಂಗ, ತುಮಕೂರಿನ ಶಾಂತಲಾ ಮತ್ತು ಅಜಿತ್ ಅವರನ್ನು ಹಾಗೂ ನಿರಂಜನ ಜೈನ್ ಕುದ್ಯಾಡಿ ಅವರನ್ನು ಗೌರವಿಸಲಾಯಿತು.
ಬೆಳ್ತಂಗಡಿಯಲ್ಲಿರುವ ಪೃಥ್ವಿ ಜ್ಯುವೆಲ್ಲರ್ಸ್ ವತಿಯಿಂದ ಅನ್ನದಾನಕ್ಕಾಗಿ ಬಸದಿಗೆ ಆರು ಕ್ವಿಂಟಾಲ್ ಅಕ್ಕಿದಾನ ಮಾಡಿದ್ದಾರೆ.
ಇದೇ 17ರವರೆಗೆ ಪ್ರತಿ ದಿನ ಸಂಜೆ 4 ಗಂಟೆಯಿಂದ 5.30ರ ವರೆಗೆ ಮುನಿಗಳ ಮಂಗಲ ಪ್ರವಚನನಡೆಯಲಿದೆ.
ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ತುಮಕೂರಿನ ಸುರೇಶ ತಂಗ ಮತ್ತು ಚಿತ್ತರಂಜನ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಜಯಕುಮಾರ್ ಜೈನ್ ವಂದಿಸಿದರು. ಮಿತ್ರಸೇನ ಜೈನ್ ಅಳದಂಗಡಿ ಕಾರ್ಯಕ್ರಮ ನಿರ್ವಹಿಸಿದರು.