ನಿವೃತ್ತಿ ಸೌಲಭ್ಯಕ್ಕಾಗಿ ಮಾಜಿ ಸಿಇಒ ಧರಣಿ ಶಿರ್ಲಾಲ ಸಹಕಾರಿ ಸಂಘದ ಆಡಳಿತ ಮಂಡಳಿ ವಿರುದ್ಧ ಅಮ್ಮಾಜಿ ಕೋಟ್ಯಾನ್ ಆರೋಪ

 

 

 

ಶಿರ್ಲಾಲು: ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ (ನಿ.), ಶಿರ್ಲಾಲು ಇದರ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ಅವರು ತಮಗೆ ಸಲ್ಲಬೇಕಾದ ನಿವೃತ್ತಿ ಸೌಲಭ್ಯಗಳನ್ನು ಪಾವತಿಸುವಂತೆ ಆಗ್ರಹಿಸಿ ಗುರುವಾರ ಸಂಘದ ಕಚೇರಿ ಎದುರು ಧರಣಿ ನಡೆಸುತಿದ್ದಾರೆ.

ಕಳೆದ ಐದು ವರ್ಷಗಳ ಕಾಲ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅಮ್ಮಾಜಿ ಕೋಟ್ಯಾನ್, ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದಾಯಕ ಸ್ಥಿತಿಗೆ ತರುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸರಕಾರದ ನಿಯಮದಂತೆ ವಯೋಸಹಜ ನಿವೃತ್ತಿ ಹೊಂದಿದ ಬಳಿಕ ನಿವೃತ್ತ ಜೀವನಕ್ಕೆ ಆಧಾರವಾಗಬೇಕಿದ್ದ ಸೌಲಭ್ಯಗಳು ಹಾಗೂ ತಮಗೆ ಸಲ್ಲಬೇಕಾದ ಹಣವನ್ನು ಸಂಸ್ಥೆಯ ಆಡಳಿತ ಮಂಡಳಿ ಇದುವರೆಗೆ ಪಾವತಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಹಲವು ಬಾರಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಾಜದ ಗಣ್ಯರ ಸಮ್ಮುಖದಲ್ಲಿಯೂ ಈ ಬಗ್ಗೆ ಮಾತುಕತೆ ನಡೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಉನ್ನತ ವಿದ್ಯಾಭ್ಯಾಸದ ಸಂದರ್ಭದಲ್ಲಿ ನಿವೃತ್ತಿ ಸೌಲಭ್ಯಗಳು ದೊರೆಯದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ತೀವ್ರ ಮಾನಸಿಕ ನೋವು ಉಂಟಾಗಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಅಮ್ಮಾಜಿ ಕೋಟ್ಯಾನ್ ಅಳಲು ತೋಡಿಕೊಂಡಿದ್ದಾರೆ.

ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಶಿರ್ಲಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಎದುರು ಶಾಂತಿಯುತ ಧರಣಿ ನಡೆಸುತಿದ್ದಾರೆ. ಅದಲ್ಲದೇ ಆಡಳಿತ ಮಂಡಳಿಯಿಂದ ಅನ್ಯಾಯಕ್ಕೊಳಗಾಗಿರುವ ಮತ್ತೋರ್ವ  ಸಿಬ್ಬಂದಿ‌    ಪ್ರಭಾಕರ ಎನ್. ಕೂಡ ಧರಣಿಯಲ್ಲಿ ಭಾಗವಹಿಸಿದ್ದಾರೆ.

error: Content is protected !!