ನರ ಬಲಿಗಾಗಿ ಕಾಯುತ್ತಿದೆ ಹೆದ್ದಾರಿ ಬದಿ ‘ಮೃತ್ಯು ಕೂಪ’: ಸಾವಿರಾರು ಪ್ರಯಾಣಿಕರು ಸಾಗುತ್ತಿದ್ದರೂ ಅಧಿಕಾರಿಗಳು ಮೌನ: ಸಣ್ಣ ಪುಟ್ಟ ಅವಘಡಗಳು ನಡೆದು ಅದೃಷ್ಟವಶಾತ್ ಪ್ರಯಾಣಿಕರು ಪಾರು: ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು, ಇಲಾಖೆ

 

 

 

ಬೆಳ್ತಂಗಡಿ: ರಾಜ್ಯದ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಇರುವ ಕೆರೆಗಳಿಗೆ ವಾಹನಗಳು ಬಿದ್ದು ಅದೆಷ್ಟೋ ಜೀವಗಳು ಬಲಿಯಾಗಿರುವುದನ್ನು ನಾವು ಕೇಳುತ್ತಿದ್ದೇವೆ. ಹೆಚ್ಚಿನ ಅನಾಹುತಗಳು ಸಮರ್ಪಕವಾದ ತಡೆಗೋಡೆಗಳು ಇಲ್ಲದೇ ಸಂಭವಿಸಿವೆ. ಇದೇ ರೀತಿಯ ಅಪಾಯವನ್ನು ಆಹ್ವಾನಿಸುತ್ತಿದೆ ನಿಡ್ಲೆ ಬಳಿಯ ಕೆರೆ.

 

 

ರಸ್ತೆ ಬದಿಯ ಅಂಚಿನಲ್ಲಿ ಕೆರೆ ಇದ್ದು, ಇದಕ್ಕೆ ಯಾವುದೇ ತಡೆಗೋಡೆ ಇಲ್ಲ. ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವಂತಹ ಕೆರೆ ಇದಾಗಿದೆ.

 

ಧರ್ಮಸ್ಥಳ ಪೆರಿಯಶಾಂತಿ ರಾಜ್ಯ ಹೆದ್ದಾರಿಯ ನಿಡ್ಲೆ ಗ್ರಾಮದ ಕೆರೆಕಂಡ ಎಂಬಲ್ಲಿ ಈ ಕೆರೆ ಇದೆ. ವಿಶ್ವ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತೀ ದಿನ ನೂರಾರು ವಾಹನಗಳಲ್ಲಿ ಸಾವಿರಾರು ಪ್ರವಾಸಿಗರು ಭಕ್ತಾದಿಗಳು ಆಗಮಿಸುತ್ತಾರೆ. ದಿನನಿತ್ಯ‌ ನೂರಾರು ಬಸ್ ಗಳೂ ಇದೇ ರಸ್ತೆಯಲ್ಲಿ ಸಾಗುತ್ತಿರುತ್ತವೆ.

 

 

 

ಅತ್ಯಧಿಕ ವಾಹನ ದಟ್ಟಣೆಯ ರಸ್ತೆಯೂ ಇದಾಗಿದೆ. ಅದರೆ ಈ ಕೆರೆಕಂಡ ಎಂಬ ಸ್ಥಳದಲ್ಲಿ ತಿರುವು ರಸ್ತೆಯ ಅಂಚಿನಲ್ಲಿ ಇರುವ ಈ ಕೆರೆಗೆ ಮಾತ್ರ ಯಾವುದೇ ರೀತಿಯ ಸಮರ್ಪಕವಾದ ತಡೆಗೋಡೆಗಳಿಲ್ಲದಿರುವುದು ಹಾಗೂ ಎಚ್ಚರಿಕೆಯ ಫಲಕಗಳು ಇಲ್ಲದೇ ಇರುವುದರಿಂದ ಅಪಾಯವನ್ನು ಆಹ್ವಾನಿಸುವಂತಿದೆ.

 

 

 

ಇದೆಲ್ಲವನ್ನೂ ನೋಡಿಯೂ, ನೋಡದ ಹಾಗೆ ಸಂಬಂಧಿಸಿದ ಇಲಾಖೆಗಳು ಹಾಗೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಅಪಾಯ ಸಂಭವಿಸಿದ ಬಳಿಕ ಎಚ್ಚರಗೊಳ್ಳುವ ರೀತಿಯಲ್ಲಿ ಸುಮ್ಮನಾಗಿದ್ದಾರೆ.

 

 

ನಿತ್ಯ ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರೊಬ್ಬರು ‘ಪ್ರಜಾಪ್ರಕಾಶ ನ್ಯೂಸ್’ಗೆ ಮಾಹಿತಿ ನೀಡಿದ್ದು, ರಸ್ತೆ ತುಂಬಾ ತಿರುವಿನಿಂದ ಕೂಡಿದ್ದು, ಎರಡೂ ಕಡೆ ಇಳಿಜಾರು ರೀತಿಯಲ್ಲಿ ಅಪಾಯದ ರೀತಿಯಲ್ಲಿ ರಸ್ತೆ ಇರುವುದರಿಂದ ಹಾಗೂ ಅತೀ ವೇಗವಾಗಿ ಚಲಿಸುವ ವಾಹನಗಳಿಗೆ ಅಪಾಯದ ಅರಿವಿಲ್ಲದೇ ಹಲವು ಬಾರಿ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿದ ಘಟನೆಗಳು ನಡೆದಿವೆ.

 

 

 

ಎರಡು ಬಾರಿ ಬೈಕ್ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಒಮ್ಮೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತಿದ್ದ ಕಾರೊಂದು ಮಧ್ಯರಾತ್ರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಪಕ್ಕದಲ್ಲೇ ಮಗುಚಿಬಿದ್ದಿದೆ.

 

 

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆದ್ದರಿಂದ ಹೆಚ್ಚಿನ ಜೀವಹಾನಿ ಸಂಭವಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಸಂಭಂದಿಸಿದವರು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

 

error: Content is protected !!