ಜಿನ ಭಕ್ತಿಯಿಂದ ಶಾಂತಿ-ನೆಮ್ಮದಿಯ ಜೀವನ: ಜಿನಮಂದಿರಗಳ ದರ್ಶನದೊಂದಿಗೆ ಜಪ, ತಪ, ಧ್ಯಾನ ಮಾಡಿದಾಗ ಪಾಪಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿ: ಪ್ರಸಂಗ ಸಾಗರ ಮುನಿ ಮಹಾರಾಜರ ಮಂಗಲ ಪ್ರವಚನ: ಗುಮ್ಮೆಗುತ್ತು ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪುನರ್ ಪ್ರತಿಷ್ಠಾಪನಾ ಸಮಾರಂಭ

 

 

 

ಬೆಳ್ತಂಗಡಿ: ಎಲ್ಲರೂ ಅಹಿಂಸೆ, ಸತ್ಯ, ಆಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಪಂಚಾಣು ವ್ರತಗಳ ಪಾಲನೆಯೊಂದಿಗೆ ಮದ್ಯ, ಮಾಂಸ ಮತ್ತು ಮಧು ತ್ಯಾಗ ಮಾಡಬೇಕು. ದೇವರ ಪೂಜೆ, ಸ್ವಾಧ್ಯಾಯ, ಸಂಯಮ, ತಪ ಮೊದಲಾದ ಷಟ್‍ಕ್ರಿಯೆಗಳೊಂದಿಗೆ ಶ್ರಾವಕರು ಸದಾ ಚಿಂತೆ ಇಲ್ಲದೆ ಶ್ರದ್ಧಾ, ಭಕ್ತಿಯಿಂದ ಆತ್ಮ ಚಿಂತನೆ ಮಾಡಿದಾಗ ಅತ್ಮನೇ ಪರಮಾತ್ಮನಾಗಬಲ್ಲ ಎಂದು ಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರು ಹೇಳಿದರು.
ಅವರು ಬುಧವಾರ ಗುಮ್ಮೆಗುತ್ತು ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು.
ಪಂಚಕಲ್ಯಾಣ ವಿಧಿಪೂರ್ವಕ ಜಿನಬಿಂಬ ಪ್ರತಿಷ್ಠಾಪನೆ ಮಾಡಿದ ಬಸದಿಯಲ್ಲಿ ಜಪ, ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ಆತ್ಮಚಿಂತನೆ ಮಾಡಿದಾಗ ಸಕಲ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಕಲ ಜೀವಿಗಳು ಕೂಡಾ ಮೋಕ್ಷ ಪ್ರಾಪ್ತಿಗೆ ಅರ್ಹವಾಗಿವೆ. ಎಲ್ಲರೂ ಪರಸ್ಪರ ಮೈತ್ರಿಯಿಂದ, ಪ್ರೀತಿ-ವಿಶ್ವಾಸದಿಂದ ಜಿನ ಭಕ್ತಿ ಮಾಡಿದಾಗ ಶಾಂತಿ-ನೆಮ್ಮದಿಯ ಜೀವನ ನಡೆಸಬಹುದು. ಜಿನಮಂದಿರಗಳ ದರ್ಶನದೊಂದಿಗೆ ಜಪ, ತಪ, ಧ್ಯಾನದಿಂದ ಸಕಲ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮುನಿಗಳು ಅಭಿಪ್ರಾಯಪಟ್ಟರು.
ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿಮಂಗಲ ವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, 24 ಕಲಶ ಅಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಬಳಿಕ ಶ್ರಾವಕರು ಮತ್ತು ಶ್ರಾವಿಕೆಯರಿಂದ ಅಹೋರಾತ್ರಿ ಜಿನಭಜನೆ ನಡೆಯಿತು.

error: Content is protected !!