ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ನಿರಾಕರಿಸಿದ್ದು ಖಂಡನೀಯ: ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಮೀನಾಮೇಷ: ಶೈಲೇಶ್.

 

 

ಬೆಳ್ತಂಗಡಿ: ಸ್ವತಂತ್ರ ಭಾರತದಲ್ಲಿ ತುಳುವರ ಶತಮಾನಗಳ ಬೇಡಿಕೆಗೆ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಳುನಾಡಿನ ಕಾಸರಗೋಡು ಸಂಸದರಾದ ರಾಜ್ ಮೋಹನ್‍ಉನ್ನಿತಾನ್ ಅವರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯ ಪ್ರಶ್ನೆಗೆ ಉತ್ತರಿಸುತ್ತ ಕೇಂದ್ರ ಸಹಾಯಕ ಗೃಹ ಸಚಿವರಾದ ಶ್ರೀ ನಿತ್ಯಾನಂದರಾಯ್ ಅವರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ನಿರಾಕರಿಸಿದ್ದು ಖಂಡನೀಯ ಎಂದು ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ.‌ ತಿಳಿಸಿದರು.
ಅವರು ‌ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ‌ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು.
ವಿವಿಧತೆಯಲಿ ಏಕತೆ ಎನ್ನುವ ಸಂವಿಧಾನದ ಆಶಯವನ್ನು ಕೇಂದ್ರ ಸರಕಾರವು ಮರೆತಂತೆ ಕಾಣುತ್ತಿದೆ.
ಪ್ರಾದೇಶಿಕ ಅಸ್ಮಿತೆ ಮತ್ತು ಭಾಷಾ ಅಸ್ಮಿತೆಯನ್ನು ನಾಶಪಡಿಸುವ ಕೇಂದ್ರ ಸರ್ಕಾರದ ಹನ್ನಾರದ ಭಾಗವೇ ತುಳು ಭಾಷೆಗೆ 8ನೇ ಪರಿಚ್ಛೇದದ ಸ್ಥಾನಮಾನ ನಿರಾಕರಣೆಯ ಹಿಂದಿನ ಕಾರಣವಾಗಿದೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷಾ ಅಸ್ಮಿತೆಯ ಉಳಿವು ಬೆಳವಣಿಗೆಗೆ ಸಹಕಾರ ಆಶ್ರಯ ನೀಡುವಲ್ಲಿ ಸರಕಾರಗಳು ವಿಫಲವಾದರೆ ಅಥವಾ ನಿರಾಕರಿಸಿದರೆ ಅಸ್ಮಿತೆಯ ಚಳುವಳಿಯು ತನ್ನದೇ ಹಾದಿಯನ್ನು ಹಿಡಿಯುತ್ತದೆ ಎನ್ನುವುದನ್ನು ಇತಿಹಾಸದಿಂದ ಕೇಂದ್ರ ಸರಕಾರವು ತಿಳಿದುಕೊಳ್ಳುವುದು ಒಳಿತು‌ ಎಂದರು.
ತುಳು ಭಾಷೆಯು ದ್ರಾವಿಡ ನಾಡಿನ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹಂಚಿ ಹೋಗಿದ್ದು ತುಳುವರ ಒಕ್ಕೊರಳ ಬೇಡಿಕೆಯಾದ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ತಮ್ಮ ನಾಡಿನ ಸೋದರ ಭಾಷೆಯ ಬಗ್ಗೆ ಈ ರಾಜ್ಯಗಳು ತೋರುತ್ತಿರುವ ತಾತ್ಸಾರ ಭಾವನೆ ತುಳುವರ ಸ್ವರಾಜ್ಯದ ಹಂಬಲಕ್ಕೆ ಹೆಚ್ಚಿನ ಬಲ ನೀಡುತ್ತಿದೆ. ತುಳು ಭಾಷೆಯನ್ನು ನಾಶಪಡಿಸಿ ಕನ್ನಡ ಮತ್ತು ಮಲಯಾಲ ಭಾಷೆಯ ಭೂಭಾಗದ ವ್ಯಾಪ್ತಿಯನ್ನು ಹೆಚ್ಚಿಸಲು ಈ ಎರಡು ರಾಜ್ಯಗಳು ಹವಣಿಸುತ್ತಿವೆ. ತುಳುವೆರೆ ಪಕ್ಷ ತುಳು ಭಾಷೆ ಮತ್ತು ನಾಡಿನ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಲುವುಗಳನ್ನು ಖಂಡಿಸುತ್ತದೆ. ಕೇಂದ್ರ ಸರಕಾರವು ಎಲ್ಲಾ ರೀತಿಯ ಅರ್ಹತೆಗಳಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಮತ್ತು ತುಳು ರಾಜ್ಯ ರಚಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಒತ್ತಾಯಿಸಿದರು.
ತುಳು ಭಾಷೆ ದಮನ ಮಾಡುವ ಕಾರ್ಯ ಬಿಟ್ಟು ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನವನ್ನು ಕರ್ನಾಟಕ ಮತ್ತು ಕೇರಳ ಸರಕಾರಗಳು ನೀಡಬೇಕು. ತುಳುನಾಡಿನಲ್ಲಿ ಕನ್ನಡ ಮತ್ತು ಮಲಯಾಲ ಭಾಷೆಗಳ ಹೇರಿಕೆ ಕೂಡಲೆ ನಿಲ್ಲಿಸಬೇಕು. ತುಳುನಾಡಿನಲ್ಲಿ ಆಡಳಿತ ಮತ್ತು ಶಿಕ್ಷಣವು ತುಳು ಭಾಷೆಯಲ್ಲಿ ನಡೆಯುವಂತ ಪೂರಕ ವಾತಾವರಣವನ್ನುರಾಜ್ಯ ಸರಕಾರಗಳು ನಿರ್ಮಿಸಬೇಕು ಎಂದು ತುಳುವೆರೆ ಪಕ್ಷವು ಆಗ್ರಹಿಸುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!