ಕರಾವಳಿಯ ಸಂಸ್ಕೃತಿ, ಪರಂಪರೆಯ ಸಂಕೇತ ಕಂಬಳ ಉಳಿಸುವ ಪ್ರಯತ್ನ: ಪಕ್ಷಾತೀತವಾಗಿ ಸಮಿತಿ ರಚಿಸಿ ಕಂಬಳ‌‌ ಮುನ್ನಡೆಸುವ ಕಾಯಕ: ಜಾಗದ ಮಾಲೀಕರ‌ ಬೆಂಬಲದೊಂದಿಗೆ ಮಾ. 5ರಂದು ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ: ತಾಲೂಕಿನಲ್ಲಿ ಸರಕಾರದ ಸಹಕಾರದೊಂದಿಗೆ ‌ಸುಸಜ್ಜಿತ ಕಂಬಳ ಕರೆ‌ನಿರ್ಮಿಸುವ ಗುರಿ: ತುರ್ತು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ‌ ಹೇಳಿಕೆ

 

 

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಸ್ಕೃತಿ, ಪರಂಪರೆಯ ಸಂಕೇತವಾಗಿರುವ ಕಂಬಳವನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ದೃಷ್ಟಿಯಿಂದ ಕುಕ್ಕೇಡಿ ಗ್ರಾಮಸ್ಥರು ಹಾಗೂ ಕಂಬಳ ಕ್ರೀಡಾಭಿಮಾನಿಗಳ ಆಗ್ರಹದಂತೆ ಈ ಕಂಬಳವನ್ನು ನಿಲ್ಲಿಸದೆ ಮುಂದುವರೆಸಿಕೊಂಡು ಹೋಗಬೇಕೆನ್ನುವ ಕಾರಣದಿಂದ ಕಂಬಳದ ನೇತೃತ್ವ ವಹಿಸಿಕೊಂಡು ಎಲ್ಲರ ಸಹಮತದೊಂದಿಗೆ ಕಂಬಳ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ಇಲ್ಲಿ ಯಾವುದೇ‌ ರೀತಿಯ ವೈಯುಕ್ತಿಕ ಪ್ರತಿಷ್ಟೆ ಮೊದಲಾದ ವಿಚಾರವಿಲ್ಲ. ಅಧ್ಯಕ್ಷನಾಗಿಯೇ ಕೆಲಸ ಮಾಡಬೇಕೆನ್ನುವ ಆಸಕ್ತಿಯೂ ಇಲ್ಲ. ಕಂಬಳವನ್ನು ಉಳಿಸುವ ಕಾರ್ಯಕ್ಕೆ ಬದ್ಧನಾಗಿದ್ದೇನೆ. ಪಕ್ಷಬೇಧವಿಲ್ಲದೆ ಸಮಿತಿ ರಚಿಸುವ ಕಾರ್ಯ ನಡೆಸಲಾಗಿದೆ. ಒಟ್ಟಿನಲ್ಲಿ ಕಂಬಳ ನಿಗದಿತ ದಿನಾಂಕದಂದು ಕುಕ್ಕೇಡಿಯಲ್ಲಿ ನಡೆಯಬೇಕು.‌ ಕಂಬಳ ನಡೆಯುವ ಸ್ಥಳದ ಮಾಲೀಕರು ಒಪ್ಪಿದಲ್ಲಿ ಇತರೆ ಸಮಿತಿಗಳು ಮುಂದೆ ಬಂದಲ್ಲಿ ನಾವು ಅವರಿಗೆ ಬಿಟ್ಟುಕೊಡಲೂ ಸಿದ್ಧ ಎಂದು ‌ಶಾಸಕ ಹರೀಶ್ ಪೂಂಜ‌ ತಿಳಿಸಿದರು. ‌
ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಿಗದಿಯಂತೆ ಮಾ.5 ರಂದು ನಡೆಯಲಿದೆ. ಕಂಬಳ ಕರೆ ನಡೆಯುವ ಸ್ಥಳದ ಮಾಲಕರು ಅನುಮತಿ ನೀಡಿದ್ದಾರೆ. ಗೋವಿಂದ ಭಟ್ ಅವರ ನೇತೃತ್ವದಲ್ಲಿಯೇ ಕಳೆದ ಬಾರಿ ಇದ್ದ ಕಂಬಳ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಿಯೇ ಈ ಬಾರಿಯ ಕಂಬಳ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗಾಗಿ ಡಿ.18ರಂದು ಪೂರ್ವಭಾವಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎಲ್ಲರ ಅನುಮತಿಯೊಂದಿಗೆ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಕಾರ್ಯಾಧ್ಯಕ್ಷರಾಗಿ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಜನಾರ್ದನ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್, ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಹರೀಶ್ ಕುಮಾರ್, ಕೆ ಪ್ರತಾಪ್ ಸಿಂಹ ನಾಯಕ್, ಸ್ಥಳದ ಮಾಲಕ ಗೋವಿಂದ ಭಟ್, ಜಯಂತ್ ಕೋಟ್ಯಾನ್ ಮೊದಲಾದವರು‌ ಇದ್ದಾರೆ. ಜೊತೆಗೆ ಕುಕ್ಕೇಡಿ, ನಿಟ್ಟಡೆ, ನಾಲ್ಕೂರು, ಬಳೆಂಜ, ಗರ್ಡಾಡಿ, ಪಡಂಗಡಿ, ವೇಣೂರು, ಕರಿಮಣೇಲು, ಮೂಡುಕೋಡಿ, ಬಜಿರೆ ಗ್ರಾಮಗಳ ಪ್ರಮುಖರು ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ತಾಲೂಕಿನಲ್ಲಿ ಸುಸಜ್ಜಿತ ‌ಕಂಬಳ‌ ಕರೆ:

ತಾಲೂಕಿನಲ್ಲಿ ‌ಮುಂದಿನ‌ ದಿನಗಳಲ್ಲಿ ಯುವಕರನ್ನು ಕಂಬಳ ವಿಚಾರದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಕಂಬಳ‌ ಕರೆ ನಿರ್ಮಿಸುವ ಕಾರ್ಯ ಸರಕಾರದಿಂದ ನಡೆಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿ, ಸರಕಾರದ ಯುವಜನ ಕ್ರೀಡಾ ಇಲಾಖೆಯ ಸಹಕಾರದಿಂದ ಅತ್ಯಾಧುನಿಕ ಕಂಬಳ ಕರೆ‌ ನಿರ್ಮಿಸಿ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು. ಸಧ್ಯ ಈ ಬಾರಿ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ಕುರಿತು ಜಿಲ್ಲಾ ಸಮಿತಿ ಹಾಗೂ ಭಿನ್ನಮತ ಹೊಂದಿರುವ ಸಮಿತಿ ಜೊತೆಗೆ ಮಂಗಳವಾರ ಸಭೆ ನಡೆಯಲಿದ್ದು ವಿವಾದ ಇತ್ಯರ್ಥವಾಗಲಿದೆ ಎಂದರು.

ವಿವಾದದ ವಿವರ:

ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಡೆಯುವ ಜಾಗದ ಒಂದು ಕರೆ ಗೋವಿಂದ ಭಟ್ ಎಂಬವರ ಖಾಸಗಿ ಜಮೀನಾಗಿರುತ್ತದೆ. ಈ ಜಮೀನಿನಲ್ಲಿ ಅವರ ಅನುಮತಿಯ ಮೇರೆಗೆ ಕಂಬಳ ಸಮಿತಿ ಮೂಲಕ ಕಂಬಳ ನಡೆಸಿಕೊಂಡು ಬರಲಾಗುತ್ತಿತ್ತು. ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಗೋವಿಂದ ಭಟ್ ಅವರು ಕಂಬಳ ನಡೆವ ಜಾಗವನ್ನು ತನಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ಕೋರ್ಟಿಗೆ ದಾವೆ ಹೂಡಿದ್ದರು.‌ ಕಳೆದ ವರ್ಷ ಬೇಲಿ‌ ಹಾಕಿದ್ದ ಹಿನ್ನೆಲೆ ಗೋವಿಂದ ಭಟ್ ಅವರ ಬಳಿಗೆ ಕಂಬಳ ಸಮಿತಿಯವರು ತೆರಳಿ‌ ಕಂಬಳ‌‌ ಕೊನೇಯ ಬಾರಿಗೆ ನಡೆಸುವ ‌ಕುರಿತು ಬರಹ ಮೂಲಕ‌ ತಿಳಿಸಿದ್ದರು. ಈ ಕಾರಣದಿಂದ ಕಳೆದ ವರ್ಷ ಕೊನೆಯ ಬಾರಿಗೆ ಕಂಬಳ ನಡೆಸಲು ಅವಕಾಶ ನೀಡಿ, ಈ ಬಾರಿ ಕಂಬಳವನ್ನು ನಡೆಸಲು ಅವಕಾಶ ನೀಡುವುದಿಲ್ಲವೆಂದು ಗೋವಿಂದ ಭಟ್ಟರು ಸ್ಪಷ್ಟವಾಗಿ ತಿಳಿಸಿದ್ದರು. ಈ ವರ್ಷವೂ ಅನುಮತಿ ಕೋರಿದ್ದರಿಂದ ನಿರಾಕರಿಸಿದ್ದರು. ಗೋವಿಂದ ಭಟ್ ಅವರ ಬಳಿ ಶಾಸಕರ ನೆಲೆಯಲ್ಲಿ ಮಾತನಾಡಿದ್ದು, ಈ ವರ್ಷ ಒಂದು ಬಾರಿ ಕಂಬಳ ನಡೆಸಲು ಅವಕಾಶ ನೀಡುವಂತೆ ವಿನಂತಿ ಮಾಡಿದ್ದರಿಂದ ಅವರು ಈ ವರ್ಷವೂ ಅದೇ ಸ್ಥಳದಲ್ಲಿ ಕಂಬಳ ನಡೆಸಲು ಅನುಮತಿ ನೀಡಿ, ನಮಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿವಾದ ಬಗೆಹರಿದ ಕುರಿತು ಮಾಹಿತಿ ‌ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಕಂಬಳ ಸಮಿತಿ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಹಾಗೂ ಕಂಬಳ ಸಮಿತಿ ನೂತನ ಅಧ್ಯಕ್ಷ ಜನಾರ್ದನ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!