ಧರ್ಮಸ್ಥಳ: ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಸುವ ನಿಟ್ಟಿನಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆರಂಭಿಸಲಾಯಿತು. ಮಹಿಳೆಯರು ಉತ್ಪಾದಿಸಿದ ವಸ್ತುಗಳಿಗೆ ‘ಸಿರಿ’ ಸಂಸ್ಥೆ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದ್ದು, ಸಿರಿ ಸಧ್ಯ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಆನ್ ಲೈನ್ ಮೂಲಕ ಇಂದು ಮನೆ, ಮನೆಗಳಿಗೆ ವಸ್ತುಗಳು ತಲುಪುತ್ತಿವೆ. ಇದೇ ಮಾದರಿಯಲ್ಲಿ ಜನಗಳು ಸೇರುವ ಜಾತ್ರೆ, ಸಾರ್ವಜನಿಕ ಸಮಾರಂಭ ಮೊದಲಾದ ಸಂದರ್ಭದಲ್ಲಿ ಟ್ರಕ್ ಮೂಲಕ ಸಿರಿ ವಸ್ತುಗಳು ಜನರನ್ನು ಆಕರ್ಷಕ ರೀತಿಯಲ್ಲಿ ಜನರನ್ನು ತಲುಪಲಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ಸಂಚಾರಿ ಮಾರಾಟ ಮಳಿಗೆ ವಾಹನ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ 45 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಿ ಸ್ವಾವಲಂಬಿ ಜೀವನಕ್ಕೆ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿ ಗ್ರಾಮೀಣ ಮಹಿಳೆಯರ ಸಬಲೀಕಣ ಮಾಡಲಾಗಿದೆ. ಇದರಿಂದಾಗಿ ಇಂದು ಲಕ್ಷಾಂತರ ಗ್ರಾಮೀಣ ಮಹಿಳೆಯರು ಮನೆ ಮತ್ತು ಕುಟುಂಬದ ಸುಗಮ ನಿರ್ವಹಣೆಯೊಂದಿಗೆ ಆರ್ಥಿಕವಾಗಿಯೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರು ಮನೆಗಳಿಗೆ ಸೀಮಿತವಾಗದೆ, ಸ್ವ-ಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ. ಮನೆಯಿಂದ ಹೊರಗೆ ಬಂದು ವ್ಯವಹಾರ ಕುಶಲರಾಗಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆತು ಉತ್ತಮ ಸೇವೆ, ಸಾಧನೆ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಹೇಮಾವತಿ ಹೆಗ್ಗಡೆಯವರ ಪ್ರೋತ್ಸಾಹ ಶ್ಲಾಘನೀಯ ಎಂದರು.
ಬ್ಯಾಂಕ್ ಆಫ್ ಬರೋಡದ ಆಡಳಿತ ನಿರ್ದೇಶಕ ಅಜಯ ಕೆ. ಕುರಾನ ಮಾತನಾಡಿ, ಸಿರಿ ಸಂಚಾರಿ ಮಾರಾಟ ಮಳಿಯನ್ನು ಸಿರಿ ಉತ್ಪನ್ನಗಳ ಜೊತೆಗೆ ಬ್ಯಾಂಕ್ ಪರಿಕರ ಹಾಗೂ ಉತ್ಪನ್ನಗಳ ಮಾರಾಟಕ್ಕೆ ಜಂಟಿಯಾಗಿ ಬಳಸಲಾಗುವುದು. ಡಾ. ಹೆಗ್ಗಡೆಯವರು “ಶಾಪ್ ಆನ್ ದ ವೀಲ್ಸ್” ಅಂದರೆ ವಾಹನಗಳ ಮೂಲಕ ಉತ್ಪಾದಿಸಿದ ವಸ್ತುಗಳನ್ನು ತಲುಪುವ ಪರಿಕಲ್ಪನೆ ಹೊಂದಿದ್ದರು, ಇದಕ್ಕೆ ಪೂರಕವಾಗಿ ವಾಹನ ವ್ಯವಸ್ಥೆಯನ್ನು ಬ್ಯಾಂಕ್ ಮೂಲಕ ಕಲ್ಪಿಸಲಾಗಿದೆ. ಅವರ ಯೋಜನೆಗಳು ಕ್ರಿಯಾತ್ಮಕವಾಗಿದ್ದು, ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಪೂರಕವಾಗಿರುತ್ತದೆ ಎಂದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸೇವಾ ಕಳಕಳಿ ಮತ್ತು ಸಾಮಾಜಿಕ ಬದ್ಧತೆ ಶ್ಲಾಘನೀಯ. ಶಾಂತಿವನದಲ್ಲಿ ಪ್ರಶಾಂತ ಪರಿಸರದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವಿನ್ಯಾಸ, ಸೇವೆ ಮತ್ತು ಸೊಗಡು ಹಾಗೂ ಹೆಗ್ಗಡೆಯವರ ಅಭಿರುಚಿ ಪ್ರಶಂಸನೀಯ ಎಂದರು.
ಬ್ಯಾಂಕ್ ಆಫ್ ಬರೋಡದ ಮಹಾ ಪ್ರಬಂಧಕರಾದ ಆರ್. ಗಾಯತ್ರಿ ಶುಭಾಶಂಸನೆ ಮಾಡಿದರು. ಡಿ.ಜಿಎಂ. ಆರ್. ಗೋಪಾಲಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಸ್ವಾಗತಿಸಿದರು. ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳ ಶಾಖೆಯ ಪ್ರಬಂಧಕ ವಿಜಯ ಪಾಟೀಲ್ ವಂದಿಸಿದರು. ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.