ಬೆಳ್ತಂಗಡಿ: ಸಹಕಾರ ತತ್ವದಿಂದ ಸಹಕಾರಿ ಸಂಘವು ಬೆಳೆಯಲು ಸಾಧ್ಯವಾಗಿದ್ದು ಹಂತ ಹಂತವಾಗಿ ಬೆಳೆದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಭಿವೃದ್ಧಿ ದೃಷ್ಟಿಯಿಂದ ಸ್ವಂತ ನಿವೇಶನ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಉಜಿರೆಯಲ್ಲಿ ಭವ್ಯ ಸಮುದಾಯ ಭವನ ನಿರ್ಮಿಸುವ ಚಿಂತನೆಯಿದೆ. ಇದಕ್ಕೆ ಸದಸ್ಯರ ಸಹಕಾರ ಅವಶ್ಯ ಎಂದು ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಅಭಿಪ್ರಾಯಪಟ್ಟರು.
ಅವರು ಉಜಿರೆ ಎಸ್.ಪಿ.ಆಯಿಲ್ ಮಿಲ್ ವಠಾರದಲ್ಲಿ ಹಮ್ಮಿಕೊಂಡಿದ್ದ ಉಜಿರೆ ಶ್ರೀ ಕಾಲ‘ರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸೌಹಾರ್ದ ಸಹಕಾರಿಯು 2 ವರ್ಷಗಳನ್ನು ಪೂರೈಸಿ 3ನೇ ವರ್ಷಕ್ಕೆ ಕಾಲಿರಿಸಿದೆ. ಬೆಳ್ತಂಗಡಿ ತಾಲೂಕಿನ ಕಾರ್ಯವ್ಯಾಪ್ತಿಯಲ್ಲಿ ಇದ್ದ ನಮ್ಮ ಸಹಕಾರಿಯು ದ.ಕ. ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದೆ. ಸಹಕಾರಿ ಸಂಸ್ಥೆಯು 2020-21 ನೇ ಅವಧಿಯಲ್ಲಿ 25.40 ಕೋ.ರೂ. ವ್ಯವಹಾರ ನಡೆಸಿ, ಈ ಸಾಲಿನಲ್ಲಿ 16,32,899 ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವಾರ್ಷಿಕ ವರದಿ ವಾಚಿಸಿ, ಸಂಘದಲ್ಲಿ ಪ್ರಸಕ್ತ 1095 ಮಂದಿ ಸದಸ್ಯರಿದ್ದು 1,12,21,725 ರೂ. ಪಾಲು ಬಂಡವಾಳ ಹೊಂದಲಾಗಿದೆ. ಸದರಿ ವರ್ಷ 4.87 ಕೋ.ರೂ. ಸಾಲ ವಿತರಿಸಲಾಗಿದ್ದು, 4,12,42,228 ರೂ. ನಿರಖು ಠೇವಣಿ ಹೊಂದಲಾಗಿದೆ. ಸದಸ್ಯರಿಗೆ ಪ್ರಸಕ್ತ ವರ್ಷದಲ್ಲಿ ಲಾಭಾಂಶದಲ್ಲಿ ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜ| ಬಿಪಿನ್ ರಾವತ್ ಸಹಿತ ಇತರ ಸೈನಿಕರಿಗೆ ಹಾಗೂ ಮೃತಪಟ್ಟ ಸಂಘದ ಸದ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಪಾಧ್ಯಕ್ಷ ಇಚ್ಚಿಲ ಸುಂದರ ಗೌಡ, ನಿರ್ದೇಶಕರಾದ ಚೇತನಾ ಚಂದ್ರಶೇಖರ ಗೌಡ, ಶಿವಕಾಂತ ಗೌಡ, ಸರೋಜಿನಿ ವಿಜಯ ಕುಮಾರ್ ಗೌಡ, ಜಯಂತ ಗೌಡ ಗುರಿಪಳ್ಳ, ದಾಮೋದರ ಗೌಡ ಸುರುಳಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ ಸ್ವಾಗತಿಸಿ, ಬಾಲಕೃಷ್ಣ ಗೌಡ ಕೇರಿಮಾರು ವಂದಿಸಿದರು. ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಬಾಲಕೃಷ್ಣ ಗೌಡ ಕಲ್ಲಾಜೆ, ಸಿಬಂದಿ ದೀಕ್ಷಿತ್ ಗೌಡ, ಭವ್ಯಾ ಸಹಕರಿಸಿದರು.