ಯಕ್ಷಗಾನದಿಂದ ಕಲೆ ಪ್ರಸಾರದೊಂದಿಗೆ‌ ಕಲಾವಿದರಿಗೆ ಶಕ್ತಿ ಪ್ರಾಪ್ತಿ: ಆರು ವರ್ಷಗಳ ಕಾಲ ಯಕ್ಷಗಾನ ವಿದ್ಯಾರ್ಥಿಯಾಗಿದ್ದೆ: ಮೇಳಕ್ಕೆ ಚಾಲನೆ ನೀಡಿ ಶಾಸಕ‌ ಹರೀಶ್ ಪೂಂಜ‌ ಹೇಳಿಕೆ: ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಪ್ರಾರಂಭೋತ್ಸವ

 

ಬೆಳ್ತಂಗಡಿ: ಯಕ್ಷಗಾನ ಮೇಳದಿಂದ ಕಲಾವಿದರಿಗೆ ಶಕ್ತಿ ಸಿಗುತ್ತದೆಯಲ್ಲದೆ, ಕಲೆಯ ಪ್ರಸಾರವೂ ಆಗುತ್ತದೆ. ನಾಳ ದೇವಸ್ಥಾನದಲ್ಲಿ ಇದು ಐತಿಹಾಸಿಕ ಕ್ಷಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಅವರು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳ ವಠಾರದಲ್ಲಿ ಶನಿವಾರ ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಪ್ರಾರಂಭೋತ್ಸವದಲ್ಲಿ ಅವರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಳ ಕ್ಷೇತ್ರದಲ್ಲಿ ಅನ್ನದಾನ ಈಗಾಗಲೇ ನಡೆಯುತ್ತಿದೆ. ಇದೀಗ ಗೆಜ್ಜೆ ಸೇವೆಯೂ ಇಂದಿನಿಂದ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲೀಗ ಧರ್ಮಸ್ಥಳ ಹಾಗೂ ನಾಳದಲ್ಲಿ ಎರಡು ಮೇಳಗಳು ಇವೆ ಎಂಬ ಹೆಮ್ಮೆ ನಮ್ಮದಾಗಿದೆ. ಮೇಳವನ್ನು ಹೊರಡಿಸುವುದು ಅಷ್ಟು ಸುಲಭವಲ್ಲ. ಆದರೂ ಕಲಾರಾಧನೆಯ ಬದ್ಧತೆಯಿಂದಾಗಿ ಇಲ್ಲಿನ ರಾಘವೇಂದ್ರ ಅಸ್ರಣ್ಣರು ದೇವಿಯ ಸೇವೆಗೆ ಕಟಿಬದ್ದರಾಗಿದ್ದಾರೆ. ಇವರ ಪ್ರಯತ್ನಕ್ಕೆ ನಾವೆಲ್ಲರೂ ಸೇವೆ ಆಟಗಳನ್ನು ಆಡಿಸುವುದರ ಮೂಲ ನಮ್ಮ ಸೇವೆಯನ್ನು ನೀಡಬೇಕಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ತಾನು ಸುಮಾರು ಆರು ವರ್ಷಗಳ ಕಾಲ ಯಕ್ಷಗಾನದ ವಿದ್ಯಾರ್ಥಿಯಾಗಿದ್ದುದನ್ನು ನೆನಪಿಸಿಕೊಂಡ ಶಾಸಕರು, ನಾಳದಲ್ಲಿ ಮೊದಲ ಸೇವೆ ಆಟ ಆಡಿಸುವ ಭಾಗ್ಯ ದೊರಕಿದೆ ಎಂದು ಸಂತಸಪಟ್ಟರು.
ವೇ.ಮೂ. ರಾಮದಾಸ ಅಸ್ರಣ್ಣ ಖಂಡಿಗ ಮಾತನಾಡಿ, ಮೌಲಿಕತೆ ಅಳವಡಿಸಿಕೊಳ್ಳಲು, ಜ್ಞಾನದ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಪಾರ. ನಮ್ಮ ಹಿರಿಯರಿಗೆ ಪೌರಾಣಿಕ ಕಥಾನಕಗಳ ಪರಿಚಯ ಆದದ್ದೇ ಯಕ್ಷಗಾನದಿಂದ ಎಂದರು.
ಅಧ್ಯಕ್ಷತೆಯನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ. ವಹಿಸಿದ್ದರು.

 

 

ವೇದಿಕೆಯಲ್ಲಿ ಸುಳ್ಯ ಸ್ವಾತಿ ಲಾಡ್ಜ್‌ ಮಾಲಕ ಕೃಷ್ಣ ಸೋಮಯಾಜಿ, ಹಿರಿಯ ಕಲಾವಿದ ಗೋವಿಂದ ಭಟ್‌, ಹಿರಿಯ ಯಕ್ಷಗಾನ ಪ್ರೋತ್ಸಾಹಕ ಧರ್ಮಸ್ಥಳ ಬಿ. ಭುಜಬಲಿ, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಕಳಿಯ ಕೃ.ಪ.ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಹೇಮಂತ ಕುಮಾರ್‌ ಗೇರುಕಟ್ಟೆ, ದೇವರಾಜ ಶೆಟ್ಟಿ ಮದ್ವ ಸುರತ್ಕಲ್‌, ಕಳಿಯ ಗ್ರಾ.ಪಂ. ಮಾಜಿ ಸದಸ್ಯ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.

 

ಹಿರಿಯ ಕಲಾವಿದ ಕೇಶವ ಶಕ್ತಿನಗರ ಅವರನ್ನು ಸಮ್ಮಾನಿಸಲಾಯಿತು. ಬೆಳಗ್ಗೆ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಗಣಹೋಮ ನೆರವೇರಿಸಿದರು. ಸಂಜೆ ಗೆಜ್ಜೆ ಮುಹೂರ್ತ ಮಾಡಲಾಯಿತು. ಬಳಿಕ ಕ್ಷೇತ್ರದ ರಥ ಬೀದಿಯಲ್ಲಿ ಪಾಂಡವಾಶ್ವಮೇಧ ಎಂಬ ಪ್ರಥಮ ಸೇವಾ ಬಯಲಾಟ ನಡೆಯಿತು.

 

 

ಮೇಳದ ಪ್ರಧಾನ ವ್ಯವಸ್ಥಾಪಕ ಹಾಗೂ ಕ್ಷೇತ್ರದ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ಸ್ವಾಗತಿಸಿದರು. ಪ್ರಬಂಧಕ ರಾಘವ ಹೆಚ್‌. ವಂದಿಸಿದರು. ರಾಜೇಶ್‌ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು. .

error: Content is protected !!