ಉತ್ತಮ ಗುಣ, ನಡತೆಯಿಂದ ಸಾತ್ವಿಕ ಶಕ್ತಿ ಜಾಗೃತ: ಪ್ರೀತಿ, ವಿಶ್ವಾಸ ಗಳಿಕೆಯೇ ನಿಜವಾದ ಸಂಪತ್ತು: ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಉಜಿರೆಯಿಂದ ಪಾದಯಾತ್ರೆ: ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದ ಶಾಸಕ ಹರೀಶ್ ಪೂಂಜ‌

 

 

 

ಧರ್ಮಸ್ಥಳ: ಕ್ಷೇತ್ರದಲ್ಲಿ ಜನತೆ ವಿವಿಧ ರೂಪದಲ್ಲಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಭೌತಿಕ ವಿಚಾರಗಳಿಗಿಂತ ಹೆಚ್ಚು ಸತ್ಕಾರ್ಯ, ಸದ್ವಿಚಾರ, ಉತ್ತಮ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸಿದಾಗ ಪುಣ್ಯದ ಫಲ‌ ಲಭಿಸುತ್ತದೆ.‌ ಜೊತೆಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿಯೂ ಸಿಗುತ್ತದೆ. ಕ್ಷೇತ್ರಕ್ಕೆ ಹಲವು ಜನರ ಪ್ರೀತಿ-ವಿಶ್ವಾಸವೇ‌ ನಾವು ಇಲ್ಲಿಯವರೆಗೆ ಗಳಿಸಿರುವ ಅಮೂಲ್ಯ ಆಸ್ತಿಯಾಗಿದೆ  ಎಂದು ಧರ್ಮಸ್ಥಳದ ಧರ್ಮಾಧಿಕಾರಿ  ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ನುಡಿದರು.

 

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ‌ಲಕ್ಷದೀಪೋತ್ಸವ ಅಂಗವಾಗಿ ಕಾರ್ತಿಕ ಸೋಮವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಆಯೋಜಿಸಿದ್ದ ಪಾದಯಾತ್ರಿಗಳನ್ನು‌ ಉದ್ದೇಶಿಸಿ ಅಮೃತವರ್ಷಿಣಿ ಸಭಾ ಭವನದಲ್ಲಿ ಆಶೀರ್ವಚನ‌ ನೀಡಿದರು.

 

 

ಪ್ರಪಂಚಕ್ಕೆ ಬಂದ ಮೇಲೆ ಉತ್ತಮ ಕಾರ್ಯಗಳನ್ನು ಮಾಡಬೇಕು. ನಿಷ್ಕಲ್ಮಶ ಕಾರ್ಯಗಳಿಂದ ಸಾತ್ವಿಕ ಶಕ್ತಿ ಜಾಗೃತಗೊಳ್ಳುತ್ತದೆ‌‌. ಯಕ್ಷಗಾನಗಳಲ್ಲಿ ಹೆಚ್ಚಿನ ಪ್ರಸಂಗಗಳ‌ ತಾತ್ಪರ್ಯ ಅಧರ್ಮದ ನಾಶ, ಧರ್ಮದ ಪ್ರಜ್ವಲನೆಯಾಗಿದೆ‌. ನಾವು ಉತ್ತಮ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಎದುರಾಗುವುದು ಸಹಜ. ಆದರೆ ಸಣ್ಣಪುಟ್ಟ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಾವು ಮಾಡುವ ಉತ್ತಮ ಕಾರ್ಯಗಳತ್ತ ಗಮನ ಹರಿಸುವುದು ಅವಶ್ಯಕ. ಪಾದಯಾತ್ರೆ ಆರಂಭಿಸಿದ ವರ್ಷದಲ್ಲಿ ಟೀಕೆ ಕೇಳಿಬಂದವು ಆದರೆ, ಇದೀಗ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಇಮ್ಮಡಿಗೊಳ್ಳುತ್ತಾ ಸಾಗುತ್ತಿದೆ ಎಂದರು.

 

ಧರ್ಮಸ್ಥಳ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ಸದಾ ಜಾಗೃತಿಯಲ್ಲಿರುವ ಪವಿತ್ರ ಕ್ಷೇತ್ರ. ದೇಶ-ವಿದೇಶಗಳ ಭಕ್ತರೂ ಕ್ಷೇತ್ರದ ಬಗ್ಗೆ ಅಪಾರ ಶ್ರದ್ಧಾ-ಭಕ್ತಿ ಮತ್ತು ಗೌರವ ಹೊಂದಿದ್ದಾರೆ. ಕ್ಷೇತ್ರದಿಂದಲೂ ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆರ್‍ಸೆಟಿಗಳು, ಕೆರೆಗಳಿಗೆ ಕಾಯಕಲ್ಪ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಮೊದಲಾದ ಸೇವಾ ಕಾರ್ಯಗಳು ದೇಶವ್ಯಾಪಿಯಾಗಿ ನಿರಂತರವಾಗಿ ಸಾಗಿದೆ‌ ಎಂದರು.

 

ವಿಧಾನ ಪರಿಷತ್ ಸದಸ್ಯ ‌ಪ್ರತಾಪ್ ಸಿಂಹ‌ ನಾಯಕ್ ಮಾತನಾಡಿ, ಸಜ್ಜನ ಶಕ್ತಿ ಸಾಮೂಹಿಕವಾಗಿ ಜಾಗೃತವಾದಾಗ ಕ್ರಾಂತಿಕಾರಿ ಪರಿವರ್ತನೆ ಸಾಧ್ಯ. ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ಸಾಗುವುದೇ ನಮ್ಮೆಲ್ಲರ ಉದ್ದೇಶವಾಗಿದೆ. ಪ್ರತಿವರ್ಷ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ಸಂತೋಷ, ತೃಪ್ತಿ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದರು.

 

 

ಶಾಸಕ ಹರೀಶ್ ಪೂಂಜ‌ ಉಜಿರೆಯಿಂದ ಧರ್ಮಸ್ಥಳವರೆಗೆ‌ ಬರಿಗಾಲಿನಲ್ಲಿಯೇ ಪಾದಯಾತ್ರೆ ಮಾಡಿದರು. ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಪಾದಯಾತ್ರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮಾಜಮುಖಿ ಕೈಂಕರ್ಯಗಳನ್ನು‌ ಬಿಂಬಿಸುವ ‌ವಿವಿಧ ರೀತಿಯ ವಲಯ ಮಟ್ಟದ  ಟ್ಯಾಬ್ಲೋಗಳು ಗಮನ‌ ಸೆಳೆದವು. ಬದುಕು‌ ಕಟ್ಟೋಣ ಬನ್ನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಜನಪ್ರತಿನಿಧಿಗಳು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

 

 

ಕಾರ್ಯಕ್ರಮದಲ್ಲಿ  ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ ಇದ್ದರು.

 

 

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ ಕುಮಾರ್ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

 

 

ಹೊಸಕಟ್ಟೆ ಉತ್ಸವ:

ಇಂದು  ನ 29 ಸೋಮವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ಹೊಸಕಟ್ಟೆ ಉತ್ಸವ ನಡೆಯಲಿದೆ. ದೇಗುಲದ ಅಂಗಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತು ಇತ್ಯಾದಿ ಒಟ್ಟು 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.

error: Content is protected !!