ಬೆಂಗಳೂರು: ಕಳೆದ ವರ್ಷ ಜುಲೈ ತಿಂಗಳಲ್ಲಿ ಕೊರೊನಾದಿಂದ ಮೃತಪಟ್ಟ ಇಬ್ಬರ ಮೃತದೇಹಗಳು ಬರೋಬ್ಬರಿ 1 ವರ್ಷ 4 ತಿಂಗಳ ಕಾಲ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ಶವಾಗಾರದಲ್ಲೇ ಉಳಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶವಾಗಾರವನ್ನು ಸ್ವಚ್ಛಗೊಳಿಸಲು ಹೋದಾಗ ಶೈತ್ಯಾಗಾರದಲ್ಲೇ ಎರಡು ಮೃತದೇಹಗಳು ಕೊಳೆತು ನಾರುತ್ತಿದ್ದವು. ಮೃತದೇಹಗಳಿಗೆ ಹಾಕಿದ್ದ ಬಿಬಿಎಂಪಿ ಟ್ಯಾಗ್ ನಿಂದಾಗಿ ಮೃತದೇಹಗಳು ಚಾಮರಾಜಪೇಟೆಯ ದುರ್ಗಾ (40) ಮತ್ತು ಕೆ.ಪಿ ಅಗ್ರಹಾರದ ಮುನಿರಾಜು(35) ಅವರದ್ದು ಎಂದು ತಿಳಿದು ಬಂದಿದೆ. ಈ ಘಟನೆಗೆ ಇಎಸ್ಐ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.ಮೃತದೇಹಗಳನ್ನು ಅಂತ್ಯಕ್ರಿಯೆಗೆ ಬಿಬಿಎಂಪಿಗೆ ಒಪ್ಪಿಸಲು ಇಎಸ್ಐ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಮೊದಲ ಅಲೆಯಲ್ಲಿ ಬಿಬಿಎಂಪಿಯೇ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣ ಮೃತರ ಕುಟುಂಬದ ಸದಸ್ಯರು ಸಹ ಆಸ್ಪತ್ರೆಯ ಕಡೆ ಸುಳಿದಿರಲಿಲ್ಲ. ಆದರೆ ಆಸ್ಪತ್ರೆ ಹಾಗೂ ಬಿಬಿಎಂಪಿ ನಡುವೆ ಆದ ಮಾಹಿತಿ ಕೊರತೆಯಿಂದ ಈ ಎರಡು ಮೃತದೇಹಗಳು ಶವಾಗಾರದಲ್ಲೇ ಉಳಿದಿವೆ ಎಂದು ತಿಳಿದುಬಂದಿದೆ.