ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆ ಪಡೆಯಲು ಪ್ರಯತ್ನಿಸುವುದು ಅವಶ್ಯ: ರಂಜನ್ ಕೇಳ್ಕರ್ ಕಿವಿಮಾತು ತಾಲೂಕು ಯುವ ‌ಮರಾಟಿ‌ ಸೇವಾ ಸಂಘ‌ ವಾರ್ಷಿಕ ಮಹಾಸಭೆ, ಅಭಿನಂದನಾ ಸಮಾರಂಭ

 

ಬೆಳ್ತಂಗಡಿ: ಕಲಿಕೆ ನಿರಂತರವಾಗಿ‌ ಸಾಗಿದಾಗ ಮಾತ್ರ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ. ಮರಾಟಿ ಸಮುದಾಯದ ಇಂದಿನ ಯುವ ಜನತೆ ಮುಖ್ಯವಾಗಿ ವಿದ್ಯಾವಂತರು ಸಂಕುಚಿತ ಭಾವನೆಯಿಂದ ಹೊರಬರಬೇಕಿದೆ. ವಿದ್ಯಾಭ್ಯಾಸ ಮುಗಿಸಿದ ಕೂಡಲೇ ತಮ್ಮ ಹುಟ್ಟೂರಲ್ಲೇ ಸಣ್ಣ ಪುಟ್ಟ ಕೆಲ ನಿರ್ವಹಿಸುವ ಅಥವಾ ಕೆಲಸಕ್ಕಾಗಿ ಹುಡುಕಾಡುವ ಬದಲು, ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಪಟ್ಟಣಗಳಲ್ಲಿ ಹುಡುಕಿ ಮಾಡುವುದರಿಂದ ಸ್ವಾಭಿಮಾನಿ ಜೀವನ ನಡೆಸುವ ಜೊತೆಗೆ ಪೋಷಕರಿಗೂ ಕೀರ್ತಿ ತರಲು ಸಾಧ್ಯ. ಯಾವುದೇ ವಿಚಾರದಲ್ಲಿ ಸಾಧನೆ ಮಾಡಲು ಅವಿರತ ಪರಿಶ್ರಮ ಅಗತ್ಯ ಎಂದು ಭಾರತ ಸರಕಾರ ಆರ್ಥಿಕ ಇಲಾಖೆಯ ಸಾಲ ವಸೂಲಾತಿ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ರಂಜನ್ ಕೇಳ್ಕರ್ ಕಿವಿಮಾತು ಹೇಳಿದರು.
ಅವರು ತಾಲೂಕು‌‌ ಯುವ ಮರಾಟಿ ‌ಸೇವಾ ಸಂಘದ ‌ವಾರ್ಷಿಕ ಮಹಾಸಭೆ ಹಾಗೂ‌ ಅಭಿನಂದನಾ ‌ಸಮಾರಂಭ‌ ಉದ್ಘಾಟಿಸಿ ‌ಮಾತನಾಡಿದರು.‌
ಪರಿಶಿಷ್ಟ ‌ಪಂಗಡದ ಮೀಸಲಾತಿ ಮರಾಟಿ‌ ಸಮುದಾಯದ ಜನಸಂಖ್ಯೆಗೆ ಅತಿ‌ ಕಡಿಮೆಯಾಗಿದೆ. ಇದನ್ನು ಹೆಚ್ಚಿಸಲು ಸಮುದಾಯ ಸರಕಾರಕ್ಕೆ ಒತ್ತಡ ಹೇರಬೇಕಾದ ಅಗತ್ಯತೆಯಿದೆ.‌ ಅದೇ ರೀತಿ ಸರಕಾರದ ಹಲವು ಯೋಜನೆಗಳಿದ್ದು, ಅವುಗಳ ಸದುಪಯೋಗ‌ ಪಡೆದಲ್ಲಿ‌ ಸಮುದಾಯದ ‌ಜನತೆಯ ಅಭಿವೃದ್ಧಿ ಸಾಧ್ಯ. ಹಲವು ದಲಿತ ಸಮುದಾಯಗಳಲ್ಲಿ ದೌರ್ಜನ್ಯ ನಡೆದಾಗ ಕಾನೂನು ಹೋರಾಟಕ್ಕೆ ಸಮಿತಿಗಳು ಇವೆ. ನಮ್ಮ ಸಮುದಾಯದಲ್ಲೂ ಇಂತಹುದೇ ಸಮಿತಿ‌ ರಚನೆಗೆ ಆಸಕ್ತಿ ತೋರಬೇಕಿದೆ ಎಂದರು.

 

 

ಮರಾಟಿ ಸಾಧನಾ ಪುರಸ್ಕರ

ಮರಾಟಿ ಸಾಧನಾ ಪುರಸ್ಕಾರ ಸ್ವೀಕರಿಸಿದ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ‌ಬಂಟ್ವಾಳ ಆರಕ್ಷಕ ಠಾಣೆಯ ಎ.ಎಸ್.ಐ. ವೆಂಕಟೇಶ್ ‌ನಾಯ್ಕ್ ಮಾತನಾಡಿ, ನಮ್ಮ ಸಮುದಾಯದ ಯುವ ಜನತೆ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಸರಕಾರಿ ‌ಇಲಾಖೆ ಕೆಲಸಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಲು ಆಸಕ್ತಿ ವಹಿಸಬೇಕು. ಅದೇ ರೀತಿ ಸಮುದಾಯದ ದುರ್ಬಲ ವರ್ಗದವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸಬೇಕಿದೆ. ಇಂದಿನ ಯುವಜನತೆ ಹಾದಿ ತಪ್ಪುತ್ತಿದ್ದು, ಹಿರಿಯರು ಸೇರಿಕೊಂಡು ಸೂಕ್ತ ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಬಿ.ಎಸ್.ಎನ್.ಎಲ್. ನಿವೃತ್ತ ಡಿ.ಜಿ.ಎಂ. ರಾಮ ನಾಯ್ಕ್ ಮಂಗಳೂರು ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯನ ಕೊಡುಗೆ ಅವಶ್ಯ. ಸಂಘವನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ, ಬೆಳ್ತಂಗಡಿ ಬಸಂಘ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಗತ್ತನ್ನು ಟೀಕಿಸಿ ಬದಲಾಯಿಸಲು ಸಾಧ್ಯವಿಲ್ಲ, ನಮ್ಮ ಒಬ್ಬರ ಬದಲಾವಣೆಯಿಂದ ಇಡೀ ಸಮಾಜದ ಬದಲಾವಣೆ ಸಾಧ್ಯ ಎಂದರು.
ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ತಾಲೂಕಿನಲ್ಲಿ ಮರಾಟಿ ಸಂಘವನ್ನು ಮಾಡಲಾಯಿತು. ಅಲ್ಲಿಂದ ಇಲ್ಲಯವರೆಗೆ ಸಂಘದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಸಮುದಾಯದ ನೊಂದವರ ಕಣ್ಣೊರೆಸುವ ಹಾಗೂ ಪ್ರತಿಭೆಗಳ ಬೆನ್ನು ತಟ್ಟುವ ಕಾರ್ಯ ನಡೆಸಲಾಗಿದೆ. ಇಲ್ಲಿಯವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮುಂದೆಯೂ ನಾವೆಲ್ಲರೂ ಸೇರಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಪಕ್ಷ ಹಾಗೂ ಪ್ರದೇಶಗಳ ಭಿನ್ನತೆ ತೊರೆದು ನಾವೆಲ್ಲರೂ ಮರಾಟಿಗರು ಒಂದೇ ಎಂಬ ಭಾವದಿಂದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕಿದೆ ಎಂದರು.

ಹೆಸರು ಬದಲಾವಣೆ:

ಮಹಾಸಭೆಯಲ್ಲಿ ಸಂಘದ ಹೆಸರು ಬದಲಾಯಿಸುವ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ತಾಲೂಕು ಮರಾಟಿ ಸಮಾಜ ಸೇವಾ ಸಂಘ(ರಿ.), ಬೆಳ್ತಂಗಡಿ ಎಂಬ ಹೆಸರಿನಲ್ಲಿ ಮುಂದುವರಿಯಲು ನಿರ್ಧರಿಸಲಾಯಿತು.

ಉಮೇಶ್ ಕೇಲ್ತಡ್ಕ ನೂತನ ಅಧ್ಯಕ್ಷ:

ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಮೇಶ್ ಕೇಲ್ತಡ್ಕ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಂತೋಷ್ ಕುಮಾರ್ ಲಾಯಿಲಾ ಗೌರವ ಸಲಹೆಗಾರರಾಗಿ, ವಸಂತ ನಾಯ್ಕ್, ಸತೀಶ್ ಹೆಚ್.ಎಲ್. ಉಪಾಧ್ಯಕ್ಷರಾಗಿ, ತಾರನಾಥ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಸಾದ್ ನಾಯ್ಕ್, ಸಂಜೀವ ನಾಯ್ಕ್ ಕಾರ್ಯದರ್ಶಿಯಾಗಿ, ಪ್ರಜ್ವಲ್ ನಾಯ್ಕ್ ಮುರತ್ತಕೋಡಿ ಖಜಾಂಚಿಯಾಗಿ, ರವಿ ಬಡಕೋಡಿ, ಸಚಿನ್ ಗಿಳಿಕಾಪು ಕ್ರೀಡಾ ಕಾರ್ಯದರ್ಶಿಗಳಾಗಿ, ರಾಜೇಂದ್ರ ನಾಯ್ಕ್, ಮೋಹನ್ ನಾಯ್ಕ್ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ, ಹರ್ಷಿತ್ ಪಿಂಡಿವನ, ಶರತ್ ಕಣಿಯೂರು ಮಾಧ್ಯಮ ಕಾರ್ಯದರ್ಶಿಯಾಗಿ, ರಂಜಿತ್ ನಾಯ್ಕ್ ಸವಣಾಲು ಸಂಘಟನಾ ಕಾರ್ಯದರ್ಶಿಯಾಗಿ, ಪ್ರಮೋದ್ ನಾಯ್ಕ್, ಹರೀಶ್ ಪೆರಾಜೆ, ರಾಜೇಶ್ ನಾಯ್ಕ್, ಪವಿತ್ರಾ ಮಡಂತ್ಯಾರು,  ಚಂದ್ರಾವತಿ ಕೊಯ್ಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

ಅಭಿನಂದನೆ:

ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾದವರನ್ನು ಸಮುದಾಯದ ಪರವಾಗಿ ಗೌರವಿಸಲಾಯಿತು. ಪ್ರಸಾದ್ ನಾಯ್ಕ್ ವರದಿ ವಾಚನ ಮಾಡಿದರು. ಪ್ರಜ್ವಲ್ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ವಸಂತ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ತಾರನಾಥ ನಾಯ್ಕ, ರವಿ ಬಡಕೋಡಿ ನಿರೂಪಿಸಿ ಹರ್ಷಿತ್ ಪಿಂಡಿವನ ವಂದಿಸಿದರು.

error: Content is protected !!