ಬೆಳ್ತಂಗಡಿ: ಕಟ್ಟಕಡೆಯ ಜನಸಾಮಾನ್ಯರ, ರೈತರ ಹಾಗೂ ಗ್ರಾಹಕರ ಬಳಿಗೆ ತಲುಪುವ ಶಕ್ತಿ ಸಹಕಾರಿ ಬ್ಯಾಂಕ್‌ಗಳಿಂದ ಮಾತ್ರ ಸಾಧ್ಯ. ಗ್ರಾಹಕರ ಮನಸ್ಥಿತಿ ಅರಿತು ವ್ಯವಹರಿಸುವ ಜಾಣ್ಮೆ ಸಹಕಾರ ಸಂಸ್ಥೆಯ ಉದ್ಯೋಗಿಗಳಿಗಿದೆ. ಸಹಕಾರಿ ಕ್ಷೇತ್ರವು ಸ್ಪರ್ಧಾತ್ಮಕವಾಗಿ ಇದ್ದರೆ ಮಾತ್ರ ಬೆಳವಣಿಗೆ, ಯಶಸ್ಸು ಗಳಿಸಲು ಸಾಧ್ಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ಬುಧವಾರ ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಇವರು ಬೆಳ್ತಂಗಡಿಯ ಕಾತ್ಯಾಯಿನಿ ಒಂದನೇ ಮಹಡಿಯಲ್ಲಿ ಪ್ರಾರಂಭಿಸಿರುವ 23ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ತಾಲೂಕಿನಲ್ಲಿ 33 ನವೋದಯ ಸಂಘಗಳಿದ್ದು ಮುಂದಿನ ಮಾರ್ಚ್‌ನೊಳಗೆ 66 ಸಾವಿರ ಸಂಘಗಳನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ. ಅದೇ ರೀತಿ ಫೆಬ್ರವರಿಯಲ್ಲಿ ನವೋದಯದ 8 ಲಕ್ಷ ಮಹಿಳಾ ಸದಸ್ಯರಿಗೆ ಸೀರೆ, ಹಾಗೂ ಪುರುಷರಿಗೆ ಶರ್ಟ್ ವಿತರಿಸಲಾಗುವುದು ಎಂದರು.
ಸಹಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಜನರ ಕಷ್ಟಸುಖಗಳ ಅರಿವಿರುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಸಿಬ್ಬಂದಿಗಳ ಭಾಷಾ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಹಕಾರಿ ಬ್ಯಾಂಕುಗಳತ್ತ ಬರುತ್ತಿರುವುದು ನಡೆಯುತ್ತಿದೆ. ಹೀಗಾಗಿ ಜನರ ಸೇವೆ ಮಾಡಲು ಇನ್ನಷ್ಟು ಅವಕಾಶ ಸಿಗಲಿದೆ ಎಂದ ಅವರು, ಕೇಂದ್ರ ಸರಕಾರವು ಸಹಕಾರಿ ಖಾತೆಯನ್ನು ತೆರೆದು ಸಹಕಾರಿ ಕ್ಷೇತ್ರದ ಮಹತ್ವವನ್ನು ಅರಿತುಕೊಂಡಿದೆ. ರಾಮಕೃಷ್ಣ ಸೊಸೈಟಿಯು ಆಡಳಿತಾತ್ಮಕವಾಗಿ, ವ್ಯವಹಾರಾತ್ಮಕವಾಗಿ ಬಲಿಷ್ಠವಾಗಿದ್ದು, ರಾಜ್ಯದಲ್ಲಿ ಅತ್ಯುತ್ತಮ ಮಾದರಿ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡುವ ಜಿಲ್ಲೆಯ ಏಕೈಕ ಸಹಕಾರಿ ಸಂಸ್ಥೆಯಾಗಿದ್ದು, 27 ವರ್ಷಗಳ ಸಾಧನೆಯಿಂದ ಅತ್ಯುತ್ತಮ ಸಹಕಾರ ಸಂಘ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಇಂದು ಜೀವನಕ್ಕೆ ಸಹಕಾರಿ ಕ್ಷೇತ್ರ ಅನಿವಾರ್ಯವಾಗಿದೆ. ದುರ್ಬಲರ ಜೀವನವನ್ನು ಸಧೃಡಗೊಳಿಸುವಲ್ಲಿ ಸಹಕಾರಿ ಬ್ಯಾಂಕುಗಳು ಪ್ರಾಮಾಣಿಕ ಪ್ರಯತ್ನ ನಡೆಸುವುದರಿಂದಲೇ ಸಮಾಜದಲ್ಲಿ ಸಂಘಗಳಿಗೆ ಮಹತ್ವ ಬಂದಿದೆ, ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರು ಶಾಖೆಯನ್ನು ಜನರು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ. ರೈ ಅವರು, 27 ವರ್ಷಗಳ ಹಿಂದೆ ಆರಂಭವಾದ ಸೊಸೈಟಿ ಪ್ರಸ್ತುತ ದೀಪಾವಳಿ ಸಂದರ್ಭ 25 ಶಾಖೆಗಳನ್ನು ಹೊಂದಲಿದೆ. 23ನೇ ಶಾಖೆ ಬೆಳ್ತಂಗಡಿಯಲ್ಲಿ ಆರಂಭವಾಗಿದ್ದು, ನ. ೪ ರಂದು ಉಡುಪಿಯಲ್ಲಿ 24ನೇ ಶಾಖೆ, ನ.6 ರಂದು ಶಿರ್ವದಲ್ಲಿ 25ನೇ ಶಾಖೆ ಆರಂಭವಾಗಲಿದೆ. ಸಂಘದಲ್ಲಿ 74,842 ಮಂದಿ ಸದಸ್ಯರಿದ್ದು, 7.33 ಕೋಟಿ ರೂ. ನಿವ್ವಳ ಲಾಭ ಪಡೆದಿದೆ. ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಬಿಷಪ್ಸ್ ಹೌಸ್‌ನ ರೆ.ಫಾ.ಅಬ್ರಾಹಂ ಪಟ್ಟೇರಿಲ್, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಬೆಳ್ತಂಗಡಿ ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಗೌಸಿಯಾ ಜಮಿಯಾ ಮಸೀದಿ ಅಧ್ಯಕ್ಷ ಮೊಹಮ್ಮದ್ ರಫಿ, ದ.ಕ.ಜಿ.ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಶಾಖಾ ಕಟ್ಟಡದ ಮಾಲಕ ಕೆ.ಸುನೀಲ್ ಶೆಣೈ, ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸೊಸೈಟಿ ಉಪಾಧ್ಯಕ್ಷ ಲಕ್ಷ್ಮೀ ಜಯಪಾಲ ಶೆಟ್ಟಿ, ನಿರ್ದೇಶಕರಾದ ಡಾ.ಕೆ.ಸುಭಾಶ್ಚಂದ್ರ ಶೆಟ್ಟಿ, ರವೀಂದ್ರನಾಥ ಜಿ.ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಡಾ. ಎಂ.ಸುಧಾಕರ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಕ್ , ಪ್ರಭಾರ ಮಹಾಪ್ರಬಂಧಕ ಗಣೇಶ್ ಜಿ.ಕೆ., ಶಾಖಾ ವ್ಯವಸ್ಥಾಪಕ ರೋಹಿತ್ ಎಂ.ಜೆ. ಉಪಸ್ಥಿತರಿದ್ದರು.
ನಿರ್ದೇಶಕ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿ, ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ನಿರ್ವಹಿಸಿದರು. ನಿರ್ದೇಶಕ ಪಿ.ಬಿ. ದಿವಾಕರ ರೈ ವಂದಿಸಿದರು.