ಬೆಳ್ತಂಗಡಿ: ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ನ. 07 ರಂದು ವೇಣೂರು ಶ್ರೀ ಬಾಹುಬಲಿ ಸಭಾ ಭವನದಲ್ಲಿ ನಡೆಯಲಿದ್ದು, ಈ ಸಂದರ್ಭ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಂಘದ ವ್ಯಾಪ್ತಿಯ 75 ಮಂದಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯಧನ ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ. ಇ. ಹೇಳಿದರು.
ಅವರು ಬುಧವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘವು ವೇಣೂರು, ಬಜಿರೆ, ಗುಂಡೂರಿ, ಕುಕ್ಕೇಡಿ, ನಿಟ್ಟಡೆ, ಕರಿಮಣೇಲು, ಮೂಡುಕೋಡಿ, ಅಂಡಿಂಜೆ ಹೀಗೆ 8 ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಪ್ರತಿ ಗ್ರಾಮದಿಂದ 8 ರಿಂದ 9 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭ ಬಡವರು, ವಿಕಲಾಂಗಚೇತನರಿಗೆ ವಿಶೇಷ ಒತ್ತು ನೀಡಲಾಗುವುದು. ಈ ಸಹಾಯಧನಕ್ಕೆ ಸಂಘದ ವತಿಯಿಂದ ಅರ್ಹ 75 ಮಂದಿಗೆ ತಲಾ 5 ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ. ರೂ. 3.75 ಲಕ್ಷ ವಿನಿಯೋಗಿಸಲಿದ್ದು, ತಾಲ್ಲೂಕಿನಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಶಾಸಕ ಹರೀಶ್ ಪೂಂಜ ಕೈಗೊಳ್ಳುತ್ತಿರುವ ಹಲವಾರು ಕಾರ್ಯಕ್ರಮಗಳು ಸಂಘದ ಈ ಕಾರ್ಯಕ್ಕೆ ಸ್ಪೂರ್ತಿ’ ಎಂದರು.
’ಸಂಘವು ಈ ವರ್ಷ ರೂ. 1 ಕೋಟಿಗೂ ಅಧಿಕ ಲಾಭ ಗಳಿಸಿದ್ದು, ಸಂಘದ ವತಿಯಿಂದ ಪ್ರತಿ ವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ. ತಾಲ್ಲೂಕಿಗೆ ನೆರೆ ಬಂದು ಹಾನಿಯಾದ ಸಂದರ್ಭ ಶಾಸಕರ ಕಾಳಜಿ ಫಂಡ್ ಗೆ ರೂ. 5 ಲಕ್ಷ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಕೋರೋನಾ ವಾರಿಯರ್ಸ್‌ಗಳಿಗೆ ಸಹಾಯಧನ ನೀಡಲಾಗಿದೆ. ನ.07 ರಂದು ನಡೆಯುವ ಕಾರ್ಯಕ್ರಮದ ಸಂದರ್ಭ ಸಂಘದ ವ್ಯಾಪ್ತಿಯಲ್ಲಿ ಬರುವ ಸೈನಿಕರನ್ನು, ರೈತರನ್ನು ಹಾಗೂ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರ ಮಕ್ಕಳಾದ 300 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವೂ ನಡೆಯಲಿದೆ’ ಎಂದರು.
’ಮಹಾಸಭೆಯು ಬೆಳಿಗ್ಗೆ 6 ಗಂಟೆಯಿಂದ 11:30 ರವರೆಗೆ ನಡೆಯಲಿದ್ದು, ಆ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ಇದ್ದರು.