ಬೆಳ್ತಂಗಡಿ: ಒಂದು ರಾಜಕೀಯ ಪಕ್ಷ ಏನೆಲ್ಲ ಮಾಡಬಹುದು ಎಂಬುದಕ್ಕೆ ದೀಪಾವಳಿ ಪ್ರಯುಕ್ತ ದೋಸೆ ಹಬ್ಬ ಮೂಲಕ ಹೊಸ ಕನಸ್ಸನ್ನು ಕಟ್ಟಬಹುದು ಎಂದು ಶಾಸಕ ಹರೀಶ್ ಪೂಂಜ ಹಾಗೂ ಇಲ್ಲಿನ ಬಿಜೆಪಿ ಯುವ ಮೋರ್ಚಾ ತೋರಿಸಿಕೊಟ್ಟಿದೆ. ಬೆಳ್ತಂಗಡಿ ತಾಲೂಕಿನ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಹಿರಿಯರ ಜತೆ ಇದೇ ಬಸ್ ನಿಲ್ದಾಣದಲ್ಲಿ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಪಕ್ಷ ಬೆಳೆಯುತ್ತಾ ಇತ್ತು, ಆದರೆ ಶಾಸಕರ ಸೃಷ್ಟಿ ಮಾಡಲು ಆಗಿರಲಿಲ್ಲ. ಪೂಂಜರು ಆಭ್ಯರ್ಥಿ ಆದ ಮೇಲೆ ಇಲ್ಲಿನ ಶಾಸಕ ತಾನು ಗೆದ್ದು, ಪಕ್ಷವನ್ನು ಗೆಲ್ಲಿಸಿಕೊಟ್ಟದ್ದು ತೋರಿಸಿಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ದೀಪಾವಳಿ ದೋಸೆ ಹಬ್ಬ’ ಹಾಗೂ ‘ಗೋಪೂಜೆ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಪಕ್ಷವನ್ನು ಸಮರ್ಥ, ಸಮೃದ್ಧ, ಶಕ್ತಿಶಾಲಿ ಹಾಗೂ ಸ್ವಾಭಿಮಾನ ಭಾರತವನ್ನು ನಿರ್ಮಾಣ ಮಾಡುವುದಕ್ಕಾಗಿ ಕಟ್ಟಲಾಗಿದೆ ಎಂದು ಪಕ್ಷದ ಹಿರಿಯರಾದ ಅಟಲ್ ಹಾಗೂ ಅಡ್ವಾಣಿಯವರು ಉತ್ತರ ಕೊಟ್ಟಿದ್ದರು. ದೇಶ ಹಾಗೂ ಸಮಾಜ ಕಟ್ಟುವುದಕ್ಕಾಗಿ ಬಿಜೆಪಿ ಪಕ್ಷ ಕಟ್ಟಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಬಿಜೆಪಿ ಪಕ್ಷವು ಪ್ರಪಂಚದಲ್ಲಿಯೇ ಅತೀ ಹೆಚ್ಚು ಗೌರವ ಸಿಗುವ ಪಕ್ಷವಾಗಿ ಬೆಳೆದಿದೆ ಎಂದರು.
ದೇಶ ಕಟ್ಟುವ ಭಾಗವಾಗಿ ಪಕ್ಷವನ್ನು ಕಟ್ಟುತ್ತಾ, ಒಳ್ಳೆಯ ವ್ಯಕ್ತಿಗೆ ಅಧಿಕಾರದ ಸೂತ್ರ ಕೊಟ್ಟು, ಅದರಿಂದ ಬರುವಂತಹ ಅವಕಾಶವನ್ನು ಸಮಾಜದ ಕೊನೆಯ ಮನುಷ್ಯನ ಬದುಕಿನ ಬದಲಾವಣೆ ಮಾಡುತ್ತಾ ಅಭಿವೃದ್ಧಿಯ ಶಕೆಯನ್ನು ಆರಂಭ ಮಾಡುವಂತಹ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಬಿತ್ತರಿಸುತ್ತಾ ಸಮಾಜ ಹಾಗೂ ದೇಶ ಕಟ್ಟುವುದಕೋಸ್ಕರ ಬಿಜೆಪಿ ಪಕ್ಷದ ಅಂದಿನ ಕನಸುಗಳು ಇಂದು ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಪಕ್ಷದ ಎಲ್ಲಾ ಕನಸುಗಳು ನನಸಾಗುತ್ತಿದೆ ಎಂಬುದು ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಹೆಮ್ಮೆ, ಅಭಿಮಾನ ಎಂದರು.
ನಮ್ಮ ಪಕ್ಷ ಆಡಳಿತಕ್ಕೆ ಬಂದರೆ 370 ವಿಧಿ ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದನ್ನು
ವಿರೋಧ ಪಕ್ಷಗಳು ಲೇವಡಿ ಮಾಡುವ ಕಾಲವಿತ್ತು. ಆದರೆ ಮೋದಿಯವರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಮೇಲೆ ರಾಷ್ಟ್ರೀಯತೆಯ ಕನಸುಗಳು ನನಸಾಗತೊಡಗಿದೆ. 370 ರದ್ದು ಮಾಡಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರುತ್ತಿದ್ದರೆ ಅದಕ್ಕೆ ಕಾರಣ ಬಿಜೆಪಿ ಸರಕಾರ. ಪೌರತ್ವ ತಿದ್ದುಪಡಿ ಕಾಯ್ದೆ, ರಾಮಜನ್ಮಭೂಮಿ ಸ್ಥಾಪನೆ ಸಂಕಲ್ಪದ ಮೂಲಕ ದೇಶವನ್ನು ಕಟ್ಟುವ ಸಾಮರ್ಥ್ಯ ಸಂಕಲ್ಪವಾಗಿದೆ. ದೇಶದ ಸೈನಿಕರ ಮೇಲೆ ಕಲ್ಲು ತೂರುವ ದಿನವಿತ್ತು. ಆದರೆ ಇಂದು ಪ್ರತ್ಯುತ್ತರ ನೀಡುವ ಸಾಮಾರ್ಥ್ಯ ನಮ್ಮ ಸೈನಿಕರಿಗೆ ಬಂದಿದೆ. ಇಂದು ಸಮರ್ಥ ನಾಯಕನನ್ನು ಕಂಡಿದ್ದರಿಂದ ವ್ಯವಸ್ಥೆಗಳು ಬದಲಾಗಿದೆ ಎಂದರು.
ಹಿಂದೂಗಳ ಹಬ್ಬಗಳಿಗೆ ಜೀವಂತಿಕೆ ಇರಬೇಕು: ಶಾಸಕ ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಹಿಂದೂ ಹಬ್ಬಗಳಿಗೆ ಜೀವಂತಿಕೆ ಇರಬೇಕು. ಪರಂಪರೆಯನ್ನು ಉಳಿಸಿಕೊಂಡು ಅದಕ್ಕೊಂದು ಹೊಸ ರೂಪ ಕೊಡಬೇಕು. ತಾಲೂಕಿನ ಜನತೆಗೆ ದೀಪಾವಳಿ ಹಬ್ಬದ ದೋಸೆ ಸವಿಯುವ ಅವಕಾಶ. ಒಂದು ಪಕ್ಷ ಯಾಕೆ ದೋಸೆ ಹಬ್ಬ ಮಾಡುತ್ತಿದೆ ಎಂಬುದು ಆಶ್ವರ್ಯ ಆಗಬಹುದು. ಬಿಜೆಪಿಗೆ ಸಿದ್ದಾಂತವಿದೆ. ರಾಜಕಾರಣ ಎಂಬುದು ಕೇವಲ ಅಭಿವೃದ್ಧಿ, ರಾಜಕೀಯದ ಹಿಂದೂ ಸಮಾಜ, ಹಿಂದೂ ಸಂಸ್ಕೃತಿ, ಹಿಂದೂ ಹಬ್ಬಗಳ ಆಚರಣೆ ಉಳಿಸುವ ಕರ್ತವ್ಯವಾಗಿದೆ. ಇದೇ ಬಿಜೆಪಿಯ ಮೂಲ ಉದ್ದೇಶ. ಅದೇ ನಿಟ್ಟಿನಲ್ಲಿ ಹಿಂದು ಸಮಾಜದ ಶ್ರದ್ಧೆಯ ಆಚರಣೆಯಾದ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಯುವಮೋರ್ಚಾ ಆಚರಣೆ ಮಾಡುತ್ತಿದೆ. ಕಳೆದ ವರ್ಷ ಕೊರೋನಾ ಇತ್ತು. ಈ ವರ್ಷ ಕೊರೋನಾ ಇಳಿಮುಖವಾಗಿದೆ. ಅದಕ್ಕೆ ಕಾರಣ ಜಗತ್ತಿನಲ್ಲಿ ಭಾರತದಲ್ಲಿ 100 ಕೋಟಿ ಮಂದಿಗೆ ಉಚಿತ ಲಸಿಕೆ ನೀಡಲು ಕಾರಣಕರ್ತರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಅವರಿಗೆ ಹಾಗೂ ಕೋರೋನಾ ವಾರಿಯರ್ಸ್‌ಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಅಭಿನಂದನೆಗಳು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು.
ಬೆಳಗ್ಗಿನಿಂದ ರಾತ್ರಿಯ ವರೆಗೆ ನಡೆಯುವ ದೀಪಾವಳಿ ಹಬ್ಬದ ಪ್ರಯುಕ್ತ ಎರಡನೇ ವರ್ಷದ ದೀಪಾವಳಿ ದೋಸೆ ಹಬ್ಬ ಹಾಗೂ ಗೋಪೂಜೆ ಉತ್ಸವಕ್ಕೆ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಬಿಜೆಪಿಯ ಪ್ರಮುಖರು ಭೇಟಿ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಪತ್ರಕರ್ತ ಬಿ.ಎಸ್. ಕುಲಾಲ್ ಅವರನ್ನು ಸಮ್ಮಾನಿಸಲಾಯಿತು. ಕಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಸುನೀಲ್ ಸಾಲಿಯಾನ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಸೀತಾರಾಮ ಬೆಳಾಲ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಭಿಲಾಷ್, ಕಾರ್ಯದರ್ಶಿಗಳಾದ ಯತೀಶ್ ಶೆಟ್ಟಿ, ಸುಧಾಕರ್ ಗೌಡ, ಮಂಡಲ ಯುವಮೋರ್ಚಾ ಪದಾಧಿಕಾರಿಗಳಾದ ಉಮೇಶ್ ಕುಲಾಲ್, ವಿನುತ್ ಸಾವ್ಯ, ಪ್ರಮೋದ್ ದಿಡುಪೆ, ಪ್ರಕಾಶ್ ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಬೆಳಾಲು ಸ್ವಾಗತಿಸಿದರು. ಲಾಯಿಲ ಗ್ರಾ.ಪಂ. ಸದಸ್ಯ ಅರವಿಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.