ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಛರಿಗೆ ಲಾಯಿಲ ಗ್ರಾಮ ಪಂಚಾಯತಿಯಿಂದ ಗೌರವಾರ್ಪಣೆ: ಸ್ವಚ್ಛತಾ ಘಟಕ ನಿರ್ವಹಣೆಗಾಗಿ ‘ಸ್ವಚ್ಛತಾ ಹಿ ಸೇವಾ’ ಪುರಸ್ಕಾರ ಪಡೆದ  ಪಂಚಾಯತ್ ಅಭಿವೃದ್ಧಿ ಅಧಿಕಾರಿ

 

 

ಬೆಳ್ತಂಗಡಿ: ‘ಸ್ವಚ್ಛತಾ ಹಿ ಸೇವಾ’ ಪ್ರಶಸ್ತಿ ಪುರಸ್ಕೃತ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಛ ಅವರಿಗೆ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮವು ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಇವರಿಗೆ ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಸ್ವಚ್ಛತಾ ಘಟಕದ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಚ್ಛತಾ ಹಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಈಗಾಗಲೇ ಉಜಿರೆ ಲಾಯಿಲ ಚಾರ್ಮಡಿ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿಕೊಂಡಿರುವ ಇವರನ್ನು ಲಾಯಿಲ ಪಂಚಾಯಿತಿನಲ್ಲಿ ಗೌರವಿಸಲಾಯಿತು.

 

 

ಸರಳ ರೀತಿಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಗ್ರಾ.ಪಂ ಅಧ್ಯಕ್ಷೆ  ಬೆನಡಿಕ್ಟ ಸಲ್ದಾನ ವಹಿಸಿದ್ದರು.ಪಂಚಾಯತ್ ಸದಸ್ಯ ಮಹೇಶ್ .ಕೆ. ಪ್ರಸ್ತಾವನೆ ಮಾಡಿ ಮಡಂತ್ಯಾರ್ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ನಂತರ ಅಭಿವೃದ್ಧಿ ಅಧಿಕಾರಿಯಾಗಿ ಲಾಯಿಲಕ್ಕೆ ಬಂದು ಈ ಗ್ರಾಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರಲ್ಲದೇ ಹಲವು ಪ್ರಶಸ್ತಿಗಳು ಈ ಪಂಚಾಯತ್ ಲಭಿಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದರು.

 

 

ಗ್ರಾ.ಪಂ ಸದಸ್ಯ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಪ್ರಕಾಶ ಶೆಟ್ಟಿಯವರ ಕೆಲವೊಂದು ಯೋಜನೆ ಯೋಚನೆಗಳಿಂದಾಗಿ ಇಂತಹ ಪ್ರಶಸ್ತಿ ಅವರಿಗೆ ಲಭಿಸಿದೆ ಉಜಿರೆ ಪಂಚಾಯತ್ ಘನ ತ್ಯಾಜ್ಯ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಇದು ಅವರ ಕಾರ್ಯ ವೈಖರಿಯನ್ನು ಎತ್ತಿ ತೋರಿಸುತ್ತಿದೆ. ಅದ್ದರಿಂದ ಅವರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿ ಹುಡುಕಿಕೊಂಡು ಬರಲಿದೆ. ಅದೇ ರೀತಿ ಈ ಪಂಚಾಯತ್ ಕೂಡ ರಾಷ್ಟ್ರ ಮಟ್ಟದಲ್ಲಿ ಪ್ರಕಾಶ್ ಶೆಟ್ಟಿಯವರ ಮುಂದಾಳತ್ವದಲ್ಲಿ ಮತ್ತೊಮ್ಮೆ ಹೆಸರು ಗಳಿಸಲಿ ಆಂತಹ ಕಾಲ ಶೀಘ್ರ ಕೂಡಿ ಬರಲಿ ಎಂದರು.

 

ಗೌರವ ಸ್ವೀಕರಿಸಿ ಮಾತನಾಡಿದ ಪಿಡಿಒ ಪ್ರಕಾಶ್ ಶೆಟ್ಟಿ, ನಾನು ಮೊದಲ ಬಾರಿ ಪಿಡಿಒ ಆಗಿ ಲಾಯಿಲ ಗ್ರಾಮ ಪಂಚಾಯತ್ ಗೆ ಬಂದಾಗ ಆಡಳಿತ ಹಾಗೂ ಜನರ ಪ್ರೋತ್ಸಾಹದಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿತ್ತು . ಮುಂದಿನ ದಿನಗಳಲ್ಲೂ ಆಡಳಿತ ಹಾಗೂ ಸಿಬ್ಬಂದಿ ವರ್ಗ ಇದೇ ರೀತಿ ಒಟ್ಟಾಗಿ ಕೆಲಸ ಮಾಡಿದರೆ ಮಾದರಿ ಪಂಚಾಯತ್ ಆಗಿ ಮೂಡಿ ಬರಲಿದೆ ಅದ್ದರಿಂದ ಎಲ್ಲರ ಸಹಕಾರ ಅತೀ ಅಗತ್ಯ ಎಂದರು.

 

 

ಅಧ್ಯಕ್ಷೆ ಬೆನಡಿಕ್ಟ ಸಲ್ದಾನ ಮಾತನಾಡಿ ಇಲ್ಲಿ ಇದ್ದ ಪಿಡಿಒ ಅವರು ವರ್ಗಾವಣೆಯಾಗಿ ಹೋದ ಸಂದರ್ಭದಲ್ಲಿ ಈ ಪಂಚಾಯತ್ ಗೆ ಉತ್ತಮ ಪಿಡಿಒ ಅವರ ಅವಶ್ಯಕತೆ ಬಗ್ಗೆ ಶಾಸಕರಲ್ಲಿ ಮನವಿ ಮಾಡಿ ಪ್ರಕಾಶ್ ಶೆಟ್ಟಿಯವರೇ ನಮಗೆ ಪಿಡಿಒ ಆಗಿ ಬರಬೇಕು ಎಂದು ಆಡಳಿತ ಮಂಡಳಿ ಮಾಡಿದ ಮನವಿಗೆ ಸ್ಪಂದಿಸಿ ಅವರೇ ನಮಗೆ ಅಭಿವೃದ್ಧಿ ಅಧಿಕಾರಿಯಾಗಿ ಬಂದಿದ್ದಾರೆ ಒಳ್ಳೆಯ ಕಾರ್ಯ ಯೋಜನೆಗಳ ಅನುಭವ ಇರುವ ಅವರು ಮುಂದಿನ ದಿನಗಳಲ್ಲಿ ಈ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.

 

 

ಲಾಯಿಲ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತಿದ್ದ  ಪುಟ್ಟಸ್ವಾಮಿ ಅವರು ತಣ್ಣೀರು ಪಂತ ಪಂಚಾಯತ್ ಗೆ ಪಿಡಿಒ ಆಗಿ ಪದೋನ್ನತಿಗೊಂಡು ವರ್ಗಾವಣೆಗೊಂಡಿದ್ದು ನೂತನವಾಗಿ ಕಾರ್ಯದರ್ಶಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ ಯಶೋಧರ ಶೆಟ್ಟಿ ಇವರನ್ನು ಶಾಲು ಹಾಕಿ ಸ್ವಾಗತಿಸಲಾಯಿತು.

 

 

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯೆ ಆಶಾಲತಾ ಅವರು ಪೆನ್ಸಿಲ್ ನಲ್ಲಿ ಬಿಡಿಸಿದ ಅವರ  ಭಾವಚಿತ್ರವನ್ನು ನೀಡಿ ಗೌರವಿಸಿದರು.ಪಂಚಾಯತ್ ಸದಸ್ಯ ಅರವಿಂದ ಕಾರ್ಯಕ್ರಮ ನಿರ್ವಹಿಸಿ ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿದರು.

 

 

ಈ ಸಂದರ್ಭದಲ್ಲಿ  ಹಿರಿಯ ಸದಸ್ಯೆ ಸುಗಂಧಿ ಜಗನ್ನಾಥ್ ಸೇರಿದಂತೆ  ಪಂಚಾಯತ್ ಸದಸ್ಯರುಗಳು. ಕಾರ್ಯದರ್ಶಿ ಯಶೋಧರ ಶೆಟ್ಟಿ, ಲೆಕ್ಕ ಸಹಾಯಕಿ ರೇಶ್ಮಾ ಮ ಗಂಜಿಗಟ್ಟಿ, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!