ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸರ್ವೆ ಕಾರ್ಯ ನಡೆಯುತ್ತಿದ್ದು, ಗುರುವಾಯನಕೆರೆಯಿಂದ ಉಜಿರೆಯ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ
ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವಿರೋಧ ವ್ಯಕ್ತ ಪಡಿಸಿದ್ದು ಅದರ ಪದಾಧಿಕಾರಿಗಳ ನಿಯೋಗ ಸೋಮವಾರ ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ ಮನವಿ ನೀಡಿ, ಸರಕಾರವನ್ನು ಒತ್ತಾಯಿಸಿದರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ ಅವರ ಮೂಲಕ ನಿಯೋಗವು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳ ಸಂಕಷ್ಟದ ಕುರಿತು ಪ.ಪಂ. ಮನವಿ ನೀಡಿದರು.
ಪಟ್ಟಣ ಪಂಚಾಯಿತಿಗೆ ನೀಡಿರುವ ಮನವಿಯಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಿಂದ ಉಜಿರೆವರೆಗೆ ಚತುಷ್ಪಥ, ದ್ವಿಪಥ ರಸ್ತೆ ನಿರ್ಮಾಣದ ಕುರಿತು ಪ್ರಸ್ತಾವನೆಗಳನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದು, ಅಧಿಕೃತವಾಗಿ ಯಾವುದೇ ಪ್ರಸ್ತಾವನೆಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಈಗಾಗಲೇ ಸಮಸ್ತ ವ್ಯಾಪಾರಿ ಬಂಧುಗಳು ವಿಶ್ವವ್ಯಾಪಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವ್ಯಾಪಾರವಿಲ್ಲದೆ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದು, ಚತುಷ್ಪಥ ನಿರ್ಮಾಣವಾದಲ್ಲಿ ಎಲ್ಲರ ಮೇಲೆ ಬರೆ ಎಳೆದಂತೆ ಆಗುತ್ತದೆ. ನಾವು ಅಭಿವೃದ್ಧಿಯ ವಿರುದ್ಧವಲ್ಲ. ಈ ಪ್ರಸ್ತಾವನೆಯಿಂದ ವ್ಯಾಪಾರಿಗಳು ಹಾಗೂ ಕಟ್ಟಡ ಮಾಲಕರಿಗೂ ಕೂಡಾ ಬಹಳಷ್ಟು ಕಷ್ಟ ನಷ್ಟಗಳೂ ಆಗಲಿವೆ. ಈಗ ಇರುವ ವಾಹನ ಸಾಂದ್ರತೆಗೆ (ಮುಂದಿನ ಹತ್ತು ವರ್ಷಗಳವರೆಗೆ) ದ್ವಿಪಥಕ್ಕೆ ಮಾತ್ರ ಸೂಕ್ತವಾಗಿರುತ್ತದೆ. ಚತುಷ್ಪಥಕ್ಕೆ ಬೇಕಾಗುವ ವಾಹನ ಸಾಂದ್ರತೆ ಈ ರಸ್ತೆಯಲ್ಲಿ ಇರುವುದಿಲ್ಲ. ಚತುಷ್ಪಥ ರಸ್ತೆಗೆ ನಮ್ಮ ಅಸಮ್ಮತಿ ಇರುತ್ತದೆ ಎಂದು ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ಸಂಸ್ಥೆಯ ತಾಲೂಕು ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ, ರೋನಾಲ್ಡ್ ಲೋಬೊ, ಕೋಶಾಧಿಕಾರಿ ಸುನೀಲ್ ಶೆಣೈ, ಸದಸ್ಯರುಗಳಾದ ರಾಜೇಶ್ ಶೆಟ್ಟಿ, ಶಶಿಧರ್ ಪೈ,
ಡಿ. ಜಗದೀಶ್, ಯಶವಂತ ಪಟವರ್ಧನ್, ಉಮರ್ ಫಾರೂಕ್, ಶೀತಲ್ ಜೈನ್, ಜೂಡ್ ಗೋಡ್ವಿನ್ ಲೋಬೊ, ಭಾನುಪ್ರಸನ್ನ, ಚಿದಾನಂದ ಇಡ್ಯಾ, ಲ್ಯಾನ್ಸಿ ಪಿರೇರಾ, ಯೇಸುದಾಸ್ ಮೊದಲಾದವರು ಇದ್ದರು.