ಬೆಳ್ತಂಗಡಿ: ಧಾರವಾಡದಲ್ಲಿ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ. ಎರಡು ವರ್ಷದೊಳಗೆ ಪ್ರಾರಂಭ, ಆರು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಕೊಡುಗೆ, ಮಂಗಳೂರಿನಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಘಟಕ ಹಾಗೂ ಉಜಿರೆಯಲ್ಲಿರುವ ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ಹನ್ನೊಂದು ಡಯಾಲಿಸಿಸ್ ಘಟಕಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಿಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕದ 54ನೇ ವರ್ಷದ ವರ್ಧಂತಿ ಆಚರಣೆ ಸಂದರ್ಭ ಅವರು ಹೊಸ ಯೋಜನೆಗಳನ್ನು ಪ್ರಕಟಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈಗಾಗಲೇ 365 ಕೆರೆಗಳ ಹೂಳೆತ್ತಲಾಗಿದೆ. ಈ ವರ್ಷ ಇನ್ನೂ 120 ಕೆರೆಗಳ ಹೂಳೆತ್ತಲಾಗುವುದು. 843 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯಲ್ಲಿ 250 ಕ್ಕೂ ಮಿಕ್ಕಿ ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ ಮಾಡಿದ್ದು ಈ ವರ್ಷ 12 ದೇಗುಲಗಳ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇನ್ನು ಮೂರು ತಿಂಗಳೊಳಗೆ ಬೆಂಗಳೂರಿನಲ್ಲಿ 300 ಹಾಸಿಗೆ ಸಾಮಥ್ರ್ಯದ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭಗೊಳ್ಳಲಿದೆ.
“ವಾತ್ಸಲ್ಯ” ಯೋಜನೆಯಡಿ ಅನಾಥ ವೃದ್ಧರಿಗೆ ನೆರವು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವು ನೀಡಲು ಶೌರ್ಯ ಆಪತ್ತು ತಂಡ, ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯ ವಿಸ್ತರಣಾ ಕಾರ್ಯ, ಸಕಲ ಸೌಲಭ್ಯ ಹೊಂದಿರುವ ಸರದಿಸಾಲಿನ ಸುಗಮ ವ್ಯವಸ್ಥೆ ಮಾಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್ ಶುಭಾಶಂಸನೆಗೈದು, ಸರ್ವ ಧರ್ಮಗಳ ನೆಲೆವೀಡು ಧರ್ಮಸ್ಥಳ. ಸಂಸ್ಕೃತಿಯ ತವರೂರು. ಸಕಲ ಜೀವಿಗಳಿಗೂ ಲೇಸನ್ನು ಬಯಸುವ, ನಡೆ-ನುಡಿ, ಆಚಾರ-ವಿಚಾರದಲ್ಲಿ ವೈಚಾರಿಕ ಚಿಂತಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದರು. ಧರ್ಮಸ್ಥಳ ಎಂಬ ಧರ್ಮ ಸಾಮ್ರಾಜ್ಯದ ಪವಾಡ ಪುರುಷ ಡಿ. ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿದರು.
ಪರರ ಸೇವೆಯಲ್ಲಿ ಸಮರ್ಪಣೆ ಮಾಡುವುದೇ ನಿಜವಾದ ಧರ್ಮ. ಸರ್ವಧರ್ಮಗಳ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಯಾದ ಹೆಗ್ಗಡೆಯವರ ಪಟ್ಟಾಭಿಷೇಕ ಅಂದರೆ ಸೇವಾ ದೀಕ್ಷೆ ನೀಡುವುದಾಗಿದೆ. ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನ ಮೂಲಕ ಅನುಪಮ ಸೇವೆ ಮಾಡಿದ ಹೆಗ್ಗಡೆಯವರು ಧರ್ಮಸ್ಥಳವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿ ಅಭಿನಂದಿಸಿದರು. ಸಕಲ ಭಕ್ತರಿಗೂ ಅಭಯದಾನ ನೀಡುವ ಹೆಗ್ಗಡೆಯವರು ಧರ್ಮಸ್ಥಳ ಎಂಬ ಧರ್ಮ ಸಾಮ್ರಾಜ್ಯದ ಮಹಾನ್ ಸಂತ ಎಂದು ಹೆಗ್ಗಡೆಯವರನ್ನು ಬಣ್ಣಿಸಿದರು.
ವಿಶೇಷ ಚೇತನರಿಗೆ ಸಲಕರಣೆ ವಿತರಣೆ:
ವಿಶೇಷ ಚೇತನರಾದ ಧರ್ಮಸ್ಥಳದ ಮುತ್ತಪ್ಪ ಮಡಿವಾಳ, ಬೆಳಾಲು ಲಕ್ಷ್ಮಣ ಗೌಡ, ನಾವರ ಗ್ರಾಮದ ಮಂಜಪ್ಪ ಮತ್ತು ಶಿಶಿಲದ ಗಣೇಶ ಕೃಷ್ಣ ವೆಲಂಕಾರ್ ಅವರಿಗೆ ಸಲಕರಣೆಗಳನ್ನು ವಿತರಿಸಲಾಯಿತು.
ರಾಜ್ಯದಲ್ಲಿ ಒಟ್ಟು 11,124 ಮಂದಿಗೆ ವಿಶೇಷ ಚೇತನರಿಗೆ 2 ಕೋಟಿ 46 ಲಕ್ಷ ರೂ. ವೆಚ್ಚದಲ್ಲಿ ಈ ವರೆಗೆ ಸಲಕರಣೆ ವಿತರಿಸಲಾಗಿದೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದರು.
ಕೃಷಿ ವಿಭಾಗದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಬಾಲಕೃಷ್ಣ ಪೂಜಾರಿ ಮತ್ತು ದೇವಳ ಕಚೇರಿಯಲ್ಲಿ ಭೂದಾಖಲೆಗಳ ವಿಭಾಗದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಶುಭಚಂದ್ರರಾಜ ಅವರನ್ನು ಗೌರವಿಸಲಾಯಿತು.
ಡಾ. ಎಸ್.ಆರ್. ವಿಘ್ನರಾಜ ಸಂಪಾದಿಸಿದ “ಜೈನಗ್ರಂಥಸ್ಥ” ಜನಪದ ಹಾಡುಗಳು ಮತ್ತು ಸ್ವ-ಸಹಾಯ ಸಂಘಗಳ ಚಳವಳಿಯ ಜಾಗತಿಕ ವಿಚಾರ ಸಂಕಿರಣದ ಬಗ್ಗೆ ಕೃತಿಯನ್ನು ಹೇಮಾವತಿ ವಿ. ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಹೇಮಾವತಿ ವಿ. ಹೆಗ್ಗಡೆ, ಸರ್ವಮಂಗಳ ಸೋಮಶೇಖರ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರುಗಳಾದ ಪ್ರೊ.ಎಸ್. ಪ್ರಭಾಕರ್ ಮತ್ತು ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್. ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಉಜಿರೆಯ ಎಸ್,ಡಿ. ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರವಿಶಂಕರ್ ಜಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.