ದುಬೈ: ಐ.ಪಿ.ಎಲ್. ಕ್ವಾಲಿಫಯರ್ 1ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಓವರ್ ನಲ್ಲಿ 4 ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್ ಮತ್ತು ಹೆಟ್ಮಾಯರ್ ಅವರ ಜೊತೆಯಾಟದ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಮಾಜಿ ಕಪ್ತಾಅನ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಮರ್ಥವಾಗಿ ರನ್ ಚೇಸ್ ಮಾಡಿದ ಗರಿಮೆಗೆ ಪಾತ್ರವಾಯಿತು. ಆರಂಭಿಕ ಆಟಗಾರ ಫಾಫ್ ಡುಪ್ಲೆಸ್ಸಿ ಅವರ ವಿಕೆಟ್ ಆರಂಭದಲ್ಲೇ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗಾಯಕ್ವಾಡ್ ರವರು ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮವಾಗಿ ಧೋನಿ ಹಾಗೂ ರವೀಂದ್ರ ಜಡೇಜಾ ಕ್ರೀಸ್ ನಲ್ಲಿದ್ದರು. ಅಂತಿಮ ಓವರ್ ನಲ್ಲಿ 13 ರನ್ ಗಳಿಸುವ ಅವಶ್ಯಕತೆಯಿದ್ದು ಧೋನಿ ತಮ್ಮದೇ ಶೈಲಿಯಲ್ಲಿ ಜಯದ ರನ್ ಬಾರಿಸಿದರು.
ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಿದ್ದು, ನಾಲ್ಕನೇ ಬಾರಿ ಐ.ಪಿ.ಎಲ್ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯ ಸೋತರೂ ಕಪ್ ಗೆಲುವಿಗೆ ನಾಳಿನ ಪಂದ್ಯ ವಿಜೇತರ ಜೊತೆ ಮೂರನೇ ಕ್ವಾಲಿಫಯರ್ ಪ್ಲೇ ಆಫ್ ಪಂದ್ಯದಲ್ಲಿ ಮತ್ತೆ ಗೆಲುವಿಗೆ ಪ್ರಯತ್ನಿಸಬೇಕಿದೆ.