ಉಜಿರೆ ರಬ್ಬರ್ ಸೊಸೈಟಿ ಏಷ್ಯಾದಲ್ಲೇ ನಂ.1: 2020-21ನೇ ಸಾಲಿನಲ್ಲಿ ₹ 1 ಕೋಟಿ ನಿವ್ವಳ ಲಾಭ, ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ: ಜಾಗತಿಕ ಬೇಡಿಕೆಯೊಂದಿಗೆ ಶೀಘ್ರದಲ್ಲೇ ರಬ್ಬರ್ ಧಾರಣೆ ಹೆಚ್ಚುವ ವಿಶ್ವಾಸ: ಗುರುವಾಯನಕೆರೆಯಲ್ಲಿ ಕಾಳುಮೆಣಸು ಸಂಸ್ಕರಣಾ ಘಟಕ ಶೀಘ್ರ ಆರಂಭ: ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀಧರ ಭಿಡೆ ಹೇಳಿಕೆ: ಉಜಿರೆ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ, ಸಂಸ್ಕರಣಾ ಸಹಕಾರಿ ಸಂಘದ ಮಹಾಸಭೆ

 

 

 

ಬೆಳ್ತಂಗಡಿ: ಉಜಿರೆ ರಬ್ಬರ್ ಸೊಸೈಟಿ ರಾಜ್ಯಾದ್ಯಂತ 33 ಖರೀದಿ ಕೇಂದ್ರಗಳನ್ನು ಹೊಂದಿದ್ದು, ರಬ್ಬರ್ ಖರೀದಿ ಹಾಗೂ ಮಾರಾಟ ವ್ಯವಹಾರದಲ್ಲಿ ಏಷ್ಯಾದಲ್ಲೇ ನಂ.1 ಸ್ಥಾನದಲ್ಲಿ ಮುನ್ನಡೆಯುತ್ತಿದೆ. ರಬ್ಬರ್ ದರ 2010ರ ಬಳಿಕ ಕಡಿಮೆಯಾಗಿದೆ. ಮುಖ್ಯವಾಗಿ ರಬ್ಬರ್ ಧಾರಣೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದ್ದು ಇದೀಗ ದೇಶದಲ್ಲಿ ಬೇಡಿಕೆಯಷ್ಟು ಕಚ್ಚಾ ರಬ್ಬರ್ ಲಭಿಸುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಜಾಗತಿಕ ಬೇಡಿಕೆಯೊಂದಿಗೆ ಶೀಘ್ರದಲ್ಲೇ ರಬ್ಬರ್ ಧಾರಣೆ ಹೆಚ್ಚುವ ವಿಶ್ವಾಸವಿದೆ ಎಂದು ಉಜಿರೆ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಅವರು ಉಜಿರೆಯ ಶ್ರೀ ಕೃಷ್ಣಾನುಗೃಹ ಸಭಾ ಭವನದಲ್ಲಿ ಉಜಿರೆ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ, ಸಂಸ್ಕರಣಾ ಸಹಕಾರಿ ಸಂಘದ ಮಹಾಸಭೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 

 

 

ಮುಂಡಾಜೆಯ ಜಿ.ಎನ್.ಭಿಡೆಯವರ ನೇತೃತ್ವದಲ್ಲಿ 36 ವರ್ಷಗಳ ಹಿಂದೆ ಸ್ಥಾಪನೆಗೊಂಡು ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ‌. 2020-21ನೇ ಸಾಲಿನಲ್ಲಿ ಸೊಸೈಟಿ ₹ 1 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 20% ಡಿವಿಡೆಂಟ್ ನೀಡಲಾಗುತ್ತದೆ. ಗುರುವಾಯನಕೆರೆಯಲ್ಲಿ‌ ನಿವೇಶನ ಖರೀದಿಸಿದ್ದು, ಶೀಘ್ರವಾಗಿ ಕಾಳುಮೆಣಸು‌ ಖರೀದಿ ಹಾಗೂ ಸಂಸ್ಕರಣಾ ಘಟಕ‌ 2022ರ ಜನವರಿ ‌ಒಳಗಾಗಿ ಉದ್ಘಾಟನೆಯಾಗುವ ವಿಶ್ವಾಸವಿದೆ‌. ಇಲ್ಲಿ ಕಾಳುಮೆಣಸನ್ನು ಪರಿಷ್ಕರಿಸುವ ಗಾರ್ಬಲಿಂಗ್ ಕೂಡ ನಡೆಸಲು ಉದ್ದೇಶಿಸಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸುವ ಜೊತೆಗೆ ಗುಣಮಟ್ಟದ ಉತ್ಪನ್ನವೂ ತಯಾರಾಗಲಿದೆ ಎಂದು ಹೇಳಿದರು.‌
2020-21ನೇ ಸಾಲಿನಲ್ಲಿ ಸಂಘದ ಮೂಲಕ ರಬ್ಬರ್ ಮಾರಾಟ ಮಾಡಿರುವ ಸದಸ್ಯರಿಗೆ ಕೆಜಿ ಒಂದಕ್ಕೆ ರೂ.1 ಪ್ರೋತ್ಸಾಹಧನ ಗರಿಷ್ಠ 5 ಸಾವಿರ ರೂ. ಮಿತಿಗೆ ಒಳಪಟ್ಟು ನೀಡಲಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲೂ ಸರಕಾರದ ಅನುಮತಿ ಪಡೆದು ರಬ್ಬರ್ ಕೃಷಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ವ್ಯವಹಾರ ನಡೆಸಲಾಗಿದೆ. ಇನ್ನಷ್ಟು ಖರೀದಿ ಕೇಂದ್ರ ತೆರೆಯುವ ಉದ್ದೇಶವೂ ಇದೆ ಎಂದು ಹೇಳಿದರು.
ಎಂ.ಆರ್.ಎಫ್., ಅಪೋಲೊ ಸಂಸ್ಥೆಗಳ ಜೊತೆಗೆ 150ಕ್ಕೂ ಅಧಿಕ ಸಣ್ಣ ಉತ್ಪಾದಕ ಕಂಪೆನಿಗಳೊಂದಿಗೆ ವ್ಯವಹರಿಸಲಾಗುತ್ತಿದೆ. 17 ಸಾವಿರ ಟನ್ ರಬ್ಬರ್ ಮಾರಾಟ- ಖರೀದಿಯನ್ನು ಮಧ್ಯವರ್ತಿಗಳ ಸಹಕಾರವಿಲ್ಲದೆ ನಡೆಸಲಾಗುತ್ತಿದೆ‌. ಬೆಳಗಾರರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ರಬ್ಬರ್ ಗಿಡಗಳನ್ನು ನೀಡಲು ನರ್ಸರಿಯನ್ನೂ ಸ್ಥಾಪಿಸಲಾಗುತ್ತಿದೆ ಎಂದರು.
ವಿವಿಧ ಯೋಜನೆ:
ಇತ್ತೀಚಿನ ದಿನಗಳಲ್ಲಿ ಕೃಷಿಕರ ಖರ್ಚು-ವೆಚ್ಚಗಳು ಅಧಿಕಗೊಂಡಿರುವ ಕಾರಣ ನ.30ರವರೆಗೆ ಸಂಘದಿಂದ, ರಸಗೊಬ್ಬರ ಹಾಗೂ ರೋಲರ್ ಹೊರತುಪಡಿಸಿ ಇತರ ಸಾಮಾಗ್ರಿಗಳನ್ನು ಖರೀದಿಸುವ ರೈತರಿಗೆ, ಶೇ.5 ರಿಯಾಯಿತಿ ದರದ ಅನುಕೂಲತೆ ನೀಡಲಿದೆ. ಸಂಘದ ವ್ಯವಹಾರ ವಿಸ್ತರಿಸುವ ಹಿನ್ನೆಲೆ ತಾಲೂಕಿನಲ್ಲಿ ಹಾಗೂ ಅಗತ್ಯವಿದ್ದ ಕಡೆ ಸೇವಾ ಕೇಂದ್ರಗಳನ್ನು ತೆರೆಯುವುದು, ಸಂಘದ ಶಾಖೆಗಳಿಗೆ ನಿವೇಶನ ಖರೀದಿ, ಸ್ವಂತ ಕಟ್ಟಡ ರಚನೆ, ರಬ್ಬರ್ ಹಾಲು ಖರೀದಿ ವ್ಯವಹಾರ,‌ ರಬ್ಬರ್ ಟ್ಯಾಪಿಂಗ್ ತರಬೇತಿ ಶಾಲೆ ಆರಂಭಿಸುವುದು ರಬ್ಬರ್ ರಪ್ತು ಮಾಡುವ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು‌.
ನಿರ್ದೇಶಕರಾದ ಎನ್. ಪದ್ಮನಾಭ, ಜಯಶ್ರೀ ಡಿ.ಎಂ., ಸೀತಾರತ್ನ, ಭೈರಪ್ಪ,‌ ರಾಮ ನಾಯ್ಕ್, ಸೋಮನಾಥ ಬಂಗೇರ, ಗ್ರೇಸಿಯಸ್ ವೇಗಸ್, ಎಚ್. ಪದ್ಮ ಗೌಡ, ಕೆ.ಜೆ.ಅಗಸ್ಟೀನ್, ವಿ.ವಿ.ಅಬ್ರಾಹಂ, ಕೆ. ಬಾಲಕೃಷ್ಣ ಗೌಡ, ಅಬ್ರಾಹಂ ಬಿ.ಎಸ್, ಉಪಸ್ಥಿತರಿದ್ದರು.
ಸಿಇಒ ರಾಜು ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್ ವಂದಿಸಿದರು.

error: Content is protected !!