ಬಂದಾರು: ಬಂದಾರು ಗ್ರಾಮ ಪಂಚಾಯತ್’ನ 21 ಮತ್ತು 22 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಮೇಶ್ವರಿ ಗೌಡ ಅಧ್ಯಕ್ಷತೆಯಲ್ಲಿ ಅ.9ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ನೋಡಲ್ ಅಧಿಕಾರಿ, ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್ ಗ್ರಾಮ ಸಭೆಯನ್ನು ನಡೆಸಿ ಮಾತನಾಡಿ, ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯನ್ನು ಗಮನಿಸಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಮೂಲಭೂತ ಸೌಕರ್ಯಗಳು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸ್ಥರಿಗೆ ಸಿಗುವಂತೆ ಮೊದಲು ನೋಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿಯಾದಾಗ, ರಸ್ತೆ ಕಾಂಕ್ರೀಟಿಕರಣ ಮೊದಲಾದ ಅಭಿವೃದ್ಧಿ ಸಾಧ್ಯ ಎಂದರು.
ತೋಟಗಾರಿಕೆಯಲ್ಲಿ ನೇಂದ್ರ ಬಾಳೆ, ಗೋಡಂಬಿ,ಕೊಕ್ಕೋ, ಕಾಳುಮೆಣಸು, ಸೋಲಾರ್
ಡ್ರೈಯರ್, ಅಣಬೆ ಕೃಷಿ, ರಾಬೊಂಟನ್, ಜೇನು, ತಾಳೆಬೆಳೆ ಮುಂತಾದವುಳಿಗೆ ಸಹಾಯಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಇಲಾಖೆಯನ್ನು ಸಂಪರ್ಕಿಸಬಹುದು. ಅಣಬೆ ಕೃಷಿ ಹಾಗೂ ಜೇನುಕೃಷಿಗೆ ಇಲ್ಲಿನ ಕೃಷಿಕರಿಗೆ ಒಲವಿದೆ. ಇಲ್ಲಿ ತರಬೇತಿಯನ್ನು ನೀಡಳು ಕೇಳಿಕೊಂಡಿದ್ದು, ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಮಾತನಾಡಿ, ಮಹಾತ್ಮ ಗಾಂಧಿ ಯೋಜನೆ ಉದ್ಯೋಗ ಖಾತರಿಯಲ್ಲಿ ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಆರು ತಿಂಗಳಿನಲ್ಲಿಯೇ ಆಗಿದೆ. ಜಿಲ್ಲೆಯಲ್ಲಿ ನಮ್ಮ ಪಂಚಾಯತ್ ಪ್ರಥಮ ಸ್ಥಾನದಲ್ಲಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ.ಕೆ. ಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ. ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸದಸ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರಿಂದ ಉತ್ತಮ ಸಹಕಾರ ನೀಡಿದ್ದಾರೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ 120 ಮಂದಿಗೆ ವ್ಯಾಕ್ಸಿನ್ ಆಗಬೇಕಾಗಿದೆ. ಕೂಡಲೇ ವ್ಯವಸ್ಥೆ ಮಾಡುತ್ತೇವೆ. ಪಂಚಾಯತ್ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಪಂಚಾಯತ್ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ದಿನೇಶ್ ಗೌಡ ಖಂಡಿಗ, ಸುಚಿತ್ರ, ಪವಿತ್ರ, ಚೇತನ, ಪುಷ್ಪ, ವಿಮಲಾ, ಮೋಹನ್, ಅನಿತಾ, ಭಾರತಿ, ಬಾಲಕೃಷ್ಣ ಗೌಡ, ಶಿವಗೌಡ, ಶಿವಪ್ರಸಾದ್, ಮಂಜುಶ್ರೀ, ಶಾಂತಾ ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.