ಇನ್ನೂರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳ ಯಕ್ಷಗಾನ ಮೇಳ: ಮೈಸೂರು ಮಹಾರಾಜರ ಮುಂದೆಯೂ ಪ್ರದರ್ಶನ: ಡಾ. ವೀರೇಂದ್ರ ಹೆಗ್ಗಡೆ: ಧರ್ಮಸ್ಥಳದಲ್ಲಿ 30 ಕಲಾವಿದರಿಗೆ ‘ಪಾತಾಳ ಕಲಾ ಮಂಗಳ’ ಪ್ರಶಸ್ತಿ ಪ್ರದಾನ

 

 

ಧರ್ಮಸ್ಥಳ:  ಹಿರಿಯ ಯಕ್ಷಗಾನ ಕಲಾವಿದರನ್ನು  ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯ ನಮ್ಮದಾಗಿದೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಮೇಳದಲ್ಲಿ ಎಲ್ಲಾ ಕಲಾವಿದರು ಸೇವೆಯನ್ನು ಸಲ್ಲಿಸಿ ಗೌರವ ಹೆಚ್ಚಿಸಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ಕುರಿಯ ವಿಠಲ ಶಾಸ್ತ್ರೀ ಪ್ರತಿಷ್ಠಾನ ಉಜಿರೆ ಸಹಕಾರದೊಂದಿಗೆ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಧರ್ಮಸ್ಥಳ ಮೇಳವು ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಮೈಸೂರು ಮಹಾರಾಜರ ಎದುರು ಪ್ರದರ್ಶನ ನೀಡಿತ್ತು. ಪ್ರದರ್ಶನವನ್ನು ಮೆಚ್ಚಿದ ಅಂದಿನ ಮಹಾರಾಜರು ಕಲಾವಿದರನ್ನು ಮೈಸೂರಿನಲ್ಲಿ ಇರಿಸಿಕೊಂಡು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿದ್ದರು. ಈ ಕುರಿತು ಮಹಾರಾಜರು ಬರೆದ ಪತ್ರವು ಕ್ಷೇತ್ರದ ಪತ್ರಗಾರದಲ್ಲಿದೆ ಎಂದರು.

 

 

 

ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿದ್ದ ಪಾತಾಳ ವೆಂಕಟರಮಣ ಭಟ್ಟರು ತಮ್ಮ ಸಂಪಾದನೆಯ ಒಂದಂಶವನ್ನು ಇಂದು 30 ಮಂದಿ ಕಲಾವಿದರಿಗೆ ತಲಾ 10 ಸಾವಿರದಂತೆ ಗೌರವ ನಿಧಿಯೊಂದಿಗೆ ಪ್ರಶಸ್ತಿಯನ್ನು ನೀಡಿರುವುದಕ್ಕೆ ಡಾ. ಹೆಗ್ಗಡೆಯವರು ಅಭಿನಂದಿಸಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಶ್ರೀ ಪಾದಂಗಳವರು ಆಶೀರ್ವದಿಸಿ, ಯಕ್ಷಗಾನ ಕಲಾವಿದರ ವಿಶ್ವರೂಪ ದರ್ಶನ ಆಗಿದೆ. ಸ್ವಂತ ಸಂಪಾದನೆಯನ್ನು ಒಗ್ಗೂಡಿಸಿ ಕಲಾವಿದರಿಗೆ ಪಾತಾಳದವರು ನೀಡಿರುವುದು ಶ್ಲಾಘನೀಯ. ಕಳೆದ ಬಾರಿ 15 ಮಂದಿ ಕಲಾವಿದರಿಗೆ ಎಡನೀರು ಮಠದಲ್ಲಿ ಪಾತಾಳ ಪ್ರಶಸ್ತಿಯನ್ನು ನೀಡಲಾಗಿತ್ತು ಎಂದರು.
ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ  ಮೋಹನದಾಸ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕಸಾಪ ರಾಜ್ಯ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಿ. ಹರ್ಷೇಂದ್ರ ಕುಮಾರ್, ಪಾತಾಳ ವೆಂಕಟರಮಣ ಭಟ್, ಅಂಬಾ ಪ್ರಸಾದ್ ಪಾತಾಳ, ಶ್ರೀರಾಮ ಪಾತಾಳ ಮತ್ತಿತರರು ಉಪಸ್ಥಿತರಿದ್ದರು.

 

 

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ ಲೀಲಾವತಿ ಬೈಪಾಡಿತ್ತಾಯ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕುಂಬ್ಳೆ ಸುಂದರ ರಾವ್, ಕೆ.ಗೋವಿಂದ ಭಟ್,  ಮುಳಿಯಾಲ ಭೀಮ ಭಟ್, ಕುಂಬ್ಳೆ ಶ್ರೀಧರ ರಾವ್, ಉಬರಡ್ಕ ಉಮೇಶ ಶೆಟ್ಟಿ, ವಸಂತ ಗೌಡ ಕಾಯರ್ತಡ್ಕ, ಗೋಡೆ ನಾರಾಯಣ ಹೆಗ್ಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಕಪ್ಪೆಕೆರೆ ಮಹಾದೇವ ಹೆಗಡೆ, ಬಳ್ಕೂರು ಕೃಷ್ಣ ಯಾಜಿ, ಮಹಾದೇವ ಪಟಗಾರ, ಹೆರಂಜಾಲು ಸುಬ್ಬಣ್ಣ ಗಾಣಿಗ, ಐರೋಡಿ ಗೋವಿಂದಪ್ಪ, ದಯಾನಂದ ನಾಗೂರು, ರಾಜೀವ ಶೆಟ್ಟಿ ಹೊಸಂಗಡಿ, ಅಶೋಕ ಭಟ್ ಸಿದ್ದಾಪುರ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಪುಂಡರೀಕಾಕ್ಷ ಉಪಾಧ್ಯಾಯ, ಬೋಳಾರ ಸುಬ್ಬಯ್ಯ ಶೆಟ್ಟಿ, ಶಿವರಾಮ ಜೋಗಿ, ರೆಂಜಾಳ ರಾಮಕೃಷ್ಣ ರಾವ್, ಪೂಕಳ ಲಕ್ಸ್ಮಿನಾರಾಯಣ ಭಟ್, ಕೆ.ಎಚ್.ದಾಸಪ್ಪ ರೈ, ತೋಡಿಕ್ಕಾನ ವಿಶ್ವನಾಥ ಗೌಡ, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಬಂಟ್ವಾಳ ಜಯರಾಮ ಆಚಾರ್ಯ ಇವರುಗಳು ಪಾತಾಳ ಕಲಾ ಮಂಗಳ ಪ್ರಶಸ್ತಿ ಸ್ವೀಕರಿಸಿದರು. ಒಟ್ಟು 30 ಮಂದಿ ಕಲಾವಿದರಲ್ಲಿ   ಅನಾರೋಗ್ಯದ ಕಾರಣದಿಂದ ಬಲಿಪ ನಾರಾಯಣ ಭಾಗವತ ಹಾಗೂ ಕುರಿಯ ಗಣಪತಿ ಶಾಸ್ತ್ರಿ ಇವರ ಅನುಪಸ್ಥಿತಿಯಲ್ಲಿ 28 ಹಿರಿಯ ಕಲಾವಿದರನ್ನು ಗೌರವಿಸಲಾಯಿತು.
ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

error: Content is protected !!