ಭಜನೆಯೊಂದಿಗೆ ಭಗವಂತನ ಒಲಿಸಿಕೊಳ್ಳುವ ಕಾರ್ಯ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಆಶೀರ್ವಚನ: ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ

 

 

 

ಧರ್ಮಸ್ಥಳ: ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಕಾಂತ್ರಿಕಾರಿ ಯೋಜನೆಗಳನ್ನು ಹಾಕಿಕೊಂಡಿದೆ. ಕಲಿಯುಗದಲ್ಲಿ ಪಾಮರರಿಂದ ಪಂಡಿತರವರೆಗೂ ಎಲ್ಲರೂ ಭಜನೆಯ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು. ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಭಜನಾ ತರಬೇತಿ ಕಮ್ಮಟದಿಂದ ಉತ್ತಮ ಸಂಸ್ಕಾರ ನಿರ್ಮಾಣವಾಗುವುದರಲ್ಲಿ ಸಂದೇಹ ಇಲ್ಲ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ನುಡಿದರು.
ಅವರು ಗುರುವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆದ 23ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

 

 

ಕಲಿಯುಗದಲ್ಲಿ ಭಗವಂತನನ್ನು ನೋಡಲು ಸರಳವಾದ ಹಾಗೂ ಏಕೈಕ ದಾರಿಯೆಂದರೆ ಭಜನೆ. ಬೇರೆ ಬೇರೆ ಕಡೆಗಳಿಂದ ಬರುವ ನದಿಗಳು ಸಮುದ್ರವನ್ನು ಸೇರುವಂತೆ ಭಕ್ತರು ಪರಿಶುದ್ಧ ಭಕ್ತಿಯಿಂದ ಯಾವ ರೀತಿ ಭಜಿಸಿದರೂ ಭಗವಂತನನ್ನು ಒಲಿಸಿಕೊಳ್ಳಬಹುದು. ಗ್ರಾಮಾಭಿವೃದ್ಧಿ ಯೋಜನೆ, ಸ್ವಚ್ಛತೆ, ಮದ್ಯವರ್ಜನ ಶಿಬಿರ, ತಾಳೆಗರಿ, ಶಾಸನಗಳು ಹಾಗೂ ಅಪೂರ್ವ ಗ್ರಂಥಗಳ ಸಂರಕ್ಷಣೆ ಮೊದಲಾದ ಅನೇಕ ಸೇವಾ ಕಾರ್ಯಗಳ ಮೂಲಕ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಆರೋಗ್ಯಪೂರ್ಣ ಸಮಾಜ ರೂಪಿಸಿ ಧರ್ಮಸ್ಥಳವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಎಡನೀರು ಮಠದ ಗ್ರಂಥಗಳನ್ನು ಇಲ್ಲಿ ಕಾಪಿಡಲಾಗಿದೆ. ಇದು ಮಠಕ್ಕೂ ಅನುಕೂಲಕರವಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ವ್ಯವಸ್ಥೆಗೆ, ಪರಿಪೂರ್ಣತೆಗೆ ಹೆಸರೇ ಧರ್ಮಸ್ಥಳ. ಭಜನಾ ಪರಂಪರೆಯನ್ನು ಉಳಿಸುವಲ್ಲಿ ಕ್ಷೇತ್ರದಿಂದ ವಿಶೇಷ ಕಾರ್ಯ ನಡೆಯುತ್ತಿದೆ. ದೇಹ, ಬುದ್ದಿ, ಆತ್ಮವನ್ನು ಪರಿಶುದ್ದ ಮಾಡುವ ಶಕ್ತಿ ಭಜನೆಗಿದೆ ಎಂದರು.

 

ಮನೆಮನೆಗಳಲ್ಲಿ ಭಜನೆ:

 

ಭಜನಾ ತರಬೇತಿ ಪಡೆದವರು ನಿತ್ಯವೂ ಮನೆಯಲ್ಲಿ ಭಜನೆ ಮಾಡಬೇಕು. ಆದರ್ಶ ನಾಯಕತ್ವದೊಂದಿಗೆ ಸಮಾಜ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸಬೇಕು. ತಮ್ಮ ಊರಿನಲ್ಲಿ ಭಜನೆಯ ಸಂದೇಶವನ್ನು ಸಾರಿ, ಸರ್ವತೋಮುಖ ಪ್ರಗತಿಯ ರೂವಾರಿಗಳಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ತರಬೇತಿಯಲ್ಲಿ ಕೇವಲ ಭಜನೆಯ ಅಭ್ಯಾಸ ಮಾತ್ರ ಮಾಡಿಸದೆ ನಾಯಕತ್ವದ ಗುಣಗಳನ್ನು ರೂಪಿಸುವ ಶಿಕ್ಷಣ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದವರು ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ಕೆಲಸವನ್ನು ಮಾಡಲಿದ್ದಾರೆ. ಭಜನೆಗೆ ಯುವ ಸಮಾಜ ಹೆಚ್ಚು ಆಕರ್ಷಿತವಾದಲ್ಲಿ ದುಶ್ಚಟಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣ ಆಗಬಲ್ಲದು ಎಂದರು.

ಪೀಠಾಧಿಪತಿಯಾಗಿ ವರ್ಷ ಪೂರೈಸುವ ಮೊದಲೇ ಕ್ಷೇತ್ರಕ್ಕೆ ಭೇಟಿ ನೀಡಿದ ಎಡನೀರು ಶ್ರೀಯವರನ್ನು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಬೆಳ್ಳಿಯ ಕಲಶ ನೀಡಿ ಗೌರವಿಸಿದರು. ಕಿನ್ನಿಗೋಳಿ ಯುಗಪುರುಷ ಪ್ರಕಾಶನದಿಂದ ಪ್ರಕಟಗೊಂಡ ಮತ್ತೂರು ಸುಬ್ಬಣ್ಣ ರಚಿಸಿದ ರಾಕ್ಷಸನ ಹೃದಯ ಕದ್ದ ಮಕ್ಕಳು ಎಂಬ ಕೃತಿಯನ್ನು ಪ್ರಕಾಶಕ ಭುವನಾಭಿರಾಮ ಉಡುಪರ ಉಪಸ್ಥಿತಿಯಲ್ಲಿ ಡಾ. ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಒಂದು ವಾರ ಕಾಲ ನಡೆದ ಕಮ್ಮಟದಲ್ಲಿ 138 ಪುರುಷರು, 75 ಮಂದಿ ಮಹಿಳೆಯರು ತರಬೇತಿ ಪಡೆದುಕೊಂಡರು. ಮೂರು ಬಾರಿ ಓಂಕಾರ ಹಾಗೂ ಮೂರು ಜೈಕಾರದೊಂದಿಗೆ ಕಮ್ಮಟದ ಸಮಾರೋಪ ಕಾರ್ಯಕ್ರಮ ಆರಂಭಗೊಂಡಿತು. ಪುರುಷ ಹಾಗೂ ಮಹಿಳಾ ಶಿಬಿರಾರ್ಥಿಗಳು ಸಮವಸ್ತ್ರ ಧರಿಸಿ, ಶಿಸ್ತಿನಿಂದ ಮಂಡಲಾಕಾರದಲ್ಲಿ ನೃತ್ಯ ಭಜನೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

 

 

ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಕಸಾಪ ರಾಜ್ಯ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಿ. ಹರ್ಷೇಂದ್ರ ಕುಮಾರ್, ಪಾತಾಳ ವೆಂಕಟರಮಣ ಭಟ್, ಕಮ್ಮಟದ ಕೋಶಾಧಿಕಾರಿ ಧರ್ಣಪ್ಪ ಡಿ. ಮೊದಲಾದವರು ಉಪಸ್ಥಿತರಿದ್ದರು.
ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವರದಿ ಮಂಡಿಸಿದರು. ಭಜನಾ ಪರಿಷತ್ ಕಾರ್ಯದರ್ಶಿ ವಂದಿಸಿದರು. ಶಾಂತಿವನ ಟ್ರಸ್ಟ್ ನಿರ್ದೇಶಕ ಡಾ. ಐ ಶಶಿಕಾಂತ್ ಜೈನ್ ಶಾಂತಿ ಮಂತ್ರ ಪಠಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!