ರಾಯಲ್ಸ್ ಆಟಕ್ಕೆ ಮಂಡಿಯೂರಿದ ಕಿಂಗ್ಸ್!: ಸಿಡಿದ ಜೈಸ್ವಾಲ್, ಗುಡುಗಿದ ದುಬೆ: ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಕನಸು ಜೀವಂತ: ಯುವ ಆಟಗಾರ ಗಾಯಕ್ವಾಡ್ ಶತಕದ ಮೆರೆದಾಟ

 

 

ಬೆಂಗಳೂರು: “ಐಪಿಎಲ್” ರಾಜಸ್ಥಾನ್ ರಾಯಲ್ಸ್ ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಡೆದ ರೋಚಕ‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ನಿಂದ ಅಧಿಕಾರಯುತ ಗೆಲುವು ಸಾಧಿಸಿತು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿದ್ದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ಗೆದ್ದು ಪ್ಲೇ ಆಫ್ ತಲುಪುವ ಕನಸು ಉಳಿಸಿಕೊಂಡಿತು.
ಬಿರುಸಿನ ಬ್ಯಾಟಿಂಗ್ ನಡೆಸಿ ಗೆಲ್ಲಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದ ರಾಜಸ್ಥಾನ್ ತಂಡಕ್ಕೆ ಆರಂಭಿಕರಾದ ಇವನ್ ಲೂಯಿಸ್ ಮತ್ತು ಯಶಸ್ವಿ ಜೈಸ್ವಾಲ್ ಭರ್ಜರಿ ಅಡಿಪಾಯ ಹಾಕಿಕೊಟ್ಟರು.‌ ಆರಂಭದಿಂದಲೇ ಸಿಡಿದ ಯಶಸ್ವಿ ಜೈಸ್ವಾಲ್ ಜಸ್ಟ್ 19 ಎಸೆತಗಳಲ್ಲಿ ಅತೀ ವೇಗವಾಗಿ ಅರ್ಧ ಶತಕ ಪೂರೈಸಿ, ಮುಂದಿನ ಎಸೆತದಲ್ಲಿ ಔಟಾದರು. ಬಳಿಕ ಬಂದ ಆರ್.ಸಿ.ಬಿ.‌ ಮಾಜಿ ಆಟಗಾರ ಶಿವಂ ದುಬೆ ಅವರೂ ಸಿಕ್ಸರ್ ಗಳ‌ ಸುರಿಮಳೆಯೊಂದಿಗೆ ಅರ್ಧ ಶತಕ ಸಿಡಿಸಿ ಉತ್ತಮ ಮೊತ್ತ ಕಲೆಹಾಕಿದರು. ಇತ್ತ ಕಪ್ತಾನ‌ ಸಂಜೂ ಸಾಮ್ಸನ್ ಅವರೂ ದೂಬೆ ಅವರಿಗೆ ಉತ್ತಮ ಸಾಥ್ ನೀಡಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ರಾಜಸ್ಥಾನ್ ರಾಯಲ್ಸ್, ಇನ್ನೂ 2.3 ಓವರ್ ಗಳು ಬಾಕಿ ಉಳಿದಿರುವಂತೆಯೇ ಅಧಿಕಾರಯುತ ಗೆಲುವು ದಾಖಲಿಸಿತು.

 

 

ಎಮ್ .ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಸೋತು 190 ರನ್ ಗಳ ಬ್ರಹತ್ ಮೊತ್ತವನ್ನು ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಶತಕದೊಂದಿಗೆ ದಾಖಲಿಸಿತು. ಚೆನ್ನೈನ ಒಟ್ಟು ‌ಮೊತ್ತದಲ್ಲಿ 101 ರನ್ ಗಳು ಗಾಯಕ್ವಾಡ್ ಅವರದೇ ಆಗಿತ್ತು. ಪ್ರಮುಖ ಬೌಲರ್ ಗಳಾದ ಡ್ವೇನ್ ಬ್ರಾವೋ ಹಾಗೂ ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಬೌಲಿಂಗಿಗೆ ಇಳಿದ ಕಿಂಗ್ಸ್ ಬೃಹತ್ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಎಡವಿತು.
ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 11 ಪಂದ್ಯದಲ್ಲಿ ಎಂಟರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ 10 ಅಂಕ ಪಡೆದು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ. ಚೆನೈ ಸೂಪರ್ ಕಿಂಗ್ಸ್ ತಂಡದ ಸೆಂಚ್ಯುರಿ ಸ್ಟಾರ್ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

error: Content is protected !!