ಬೆಳ್ತಂಗಡಿ: ರಾಜ್ಯಾದ್ಯಂತ 143 ಕಡೆಗಳಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಜಿಲ್ಲಾ,ತಾಲೂಕುಗಳಲ್ಲಿ ಅ. 2ರಿಂದ 10ರವರೆಗೆ ಸಮಾವೇಶಗಳನ್ನು ಏರ್ಪಡಿಸಲಾಗುವುದು. ಈ ಕಾರ್ಯಕ್ರಮಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯುಕ್ತ ನಡೆಯಲಿರುವ ‘ಗಾಂಧಿಸ್ಮ್ರತಿ’ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲಾಗುವುದು ಎಂದು ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ.
ಅವರು ಬುಧವಾರ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ 1000 ವ್ಯಸನಮುಕ್ತರು ಭಾಗವಹಿಸಲಿದ್ದು, ಜಿಲ್ಲೆಯ 3 ಮಂದಿ ವ್ಯಸನಮುಕ್ತ ಸಾಧಕರಿಗೆ ‘ಜಾಗೃತಿ ಅಣ್ಣ’, 4 ಮಂದಿಗೆ ‘ಜಾಗೃತಿ ಮಿತ್ರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಶಾಸಕ ಹರೀಶ್ ಪೂಂಜರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ರವರು ಪಾನಮುಕ್ತ ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಬಂದರು ಮತ್ತು ಒಳನಾಡು ಸಾರಿಗೆ ಸಚಿವರು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಹಾಗೂ ಸಮಾಜ ಸೇವಕರಾದ ಮುಂಬೈಯ ಆರ್.ಬಿ. ಹೆಬ್ಬಳ್ಳಿ, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಹೆಚ್. ಮಂಜುನಾಥ್, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ, ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಸ್ಟಿಗಳು ಹಾಗೂ ದ.ಕ.ಜಿಲ್ಲಾ ವೇದಿಕೆಯ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿರಲಿದ್ದಾರೆ ಎಂದರು.
ಮದ್ಯ ಮತ್ತು ಮಾದಕ ವ್ಯಸನದ ವಿರುದ್ದ ಕಳೆದ ಮೂರು ದಶಕಗಳಿಂದ ಜಾಗೃತಿ ಮತ್ತು ಮನ:ಪರಿವರ್ತನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಆರಂಭಗೊಂಡು ಇದೀಗ ರಾಜ್ಯಮಟ್ಟದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನದೇ ಆದ ಜಿಲ್ಲಾ ಶಾಖೆಗಳನ್ನು ಹೊಂದಿದ್ದು, ಸಮಾಜದ ಗಣ್ಯರ ಮೇಲ್ವಿಚಾರಣೆಯಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದೆ.
ಪ್ರತೀ ವರ್ಷ ಕನಿಷ್ಟ 150 ಮದ್ಯವರ್ಜನ ಶಿಬಿರಗಳನ್ನು ತಲಾ 8 ದಿನಗಳ ಕಾಲ ನಡೆಸಿ ಹತ್ತು ಸಾವಿರಕ್ಕೂ ಮಿಕ್ಕಿದ ವ್ಯಸನಿಗಳಿಗೆ ಚಟದಿಂದ ಮುಕ್ತಿಹೊಂದಲು ಪ್ರೇರಣೆ, ಚಿಕಿತ್ಸೆ, ಸಲಹೆ ನೀಡುತ್ತಾ ಬಂದಿದ್ದು, ಇದುವರೆಗೆ 1475 ಮದ್ಯವರ್ಜನ ಶಿಬಿರಗಳ ಮೂಲಕ 1.25 ಲಕ್ಷ ವ್ಯಸನಿಗಳಿಗೆ ಮನಪರಿವರ್ತನೆ ಮಾಡಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶೇ.80ಕ್ಕೂ ಮಿಕ್ಕಿದ ಜನರು ನವಜೀವನವನ್ನು ಪಡೆಯುತ್ತಿರುವುದು ವೇದಿಕೆಯ ಯಶಸ್ವಿಗೆ ಕಾರಣವಾಗಿದೆ. ಇವರು 3116 ನವಜೀವನ ಸಮಿತಿಗಳ ಮೂಲಕ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಮ ಸಮೀಕ್ಷೆ, ಹಕ್ಕೊತ್ತಾಯ ಮಂಡನೆ, ಧಾರ್ಮಿಕ ಕಾರ್ಯಕ್ರಮಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಗ್ರಾಮ ಸ್ವಾಸ್ಥ್ಯ ಕಾರ್ಯಕ್ರಮ, ಜಾಗೃತಿ ಸಮಾವೇಶಗಳು, ಮಾದಕ ವಸ್ತು ವಿರೋಧಿ ದಿನಾಚರಣೆಗಳು, ಪಾನಮುಕ್ತರ ಅಭಿನಂದನಾ ಕಾರ್ಯಕ್ರಮಗಳು, ಬೀದಿ ನಾಟಕ, ಕಿರುಚಿತ್ರಗಳ ಪ್ರದರ್ಶನ, ಜನಪ್ರತಿನಿಧಿಗಳೊಂದಿಗೆ ಸಭೆ… ಹೀಗೆ ವಿಶೇಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರನ್ನು ವ್ಯಸನದಿಂದ ಮುಕ್ತಿಹೊಂದಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಪರೋಕ್ಷವಾಗಿ ಸ್ವಪ್ರೇರಣೆಯಿಂದ ಜನರು ದುಶ್ಚಟ ದುರಾಭ್ಯಾಸವನ್ನು ಬಿಟ್ಟು ನೆಮ್ಮದಿಯಿಂದ ಬದುಕುವಂತಾಗಿದೆ. ಮಹಿಳೆಯರಿಗೆ ಮಹಿಳಾ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಸ್ತುತ ಮದ್ಯವರ್ಜನ ಶಿಬಿರಗಳಿಗೆ ಮಹಿಳೆಯರೇ ಸ್ವಯಂ ಸೇವಕರಾಗಿ ಮುಂದೆ ಬಂದು ವ್ಯಸನಿಗಳನ್ನು ಶಿಬಿರಕ್ಕೆ ಸೇರಿಸುತ್ತಿದ್ದಾರೆ. ವೇದಿಕೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿದ ರಾಜ್ಯ ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಸಾರ್ವಜನಿಕರು
ವೇದಿಕೆಯೊಂದಿಗೆ ಸಹಕರಿಸುತ್ತಿದ್ದಾರೆ.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಇದರ ರಾಜ್ಯವೇದಿಕೆಯಲ್ಲಿ ಸುಮಾರು 303 ಕೋ-ಅಪ್ಟ್ ಸದಸ್ಯರು, 458 ಪದಾಧಿಕಾರಿಗಳು 7000ಕ್ಕೂ ಅಧಿಕ ಕಾರ್ಯಕಾರಿ ಮಂಡಳಿ ಸದಸ್ಯರು ಈ ಆಂದೋಲನದ ಮೂಲಕ ಕೈಜೋಡಿಸಿ ವ್ಯಸನಮುಕ್ತ ಸಮಾಜಕ್ಕಾಗಿ ಅವಿರತ ಶ್ರಮಿಸುತ್ತಿದ್ದಾರೆ. ಯುವಜನತೆಯನ್ನು ಮಾದಕ ವಸ್ತುಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳುವಂತಾಗಲು ರಾಜ್ಯವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. 1028 ಮಂದಿ ಸಂಪನ್ಮೂಲ ವ್ಯಕ್ತಿಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ವ್ಯಸನಬಾಧಿತ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ಸರಕಾರದ ಮನೋವೈದ್ಯಕೀಯ ಪ್ರಾಧಿಕಾರದಿಂದ ಪರವಾನಿಗೆ ಪಡೆದು ಉಜಿರೆಯ ಲಾಯಿಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಪ್ರಾರಂಭಿಸಿದ್ದು, ಪ್ರತೀ ತಿಂಗಳಿನಲ್ಲಿ 150 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಗಾಂಧೀಜಿಯವರ 18 ರಚನಾತ್ಮಕ ಅಂಶಗಳಲ್ಲಿ ಪಾನನಿಷೇಧವೂ ಒಂದಾಗಿದೆ. ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅ. 2 ಗಾಂಧಿ ಜಯಂತಿಯಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಾದ್ಯ್ಯಂತ ಸಮಾವೇಶಗಳನ್ನು ಏರ್ಪಡಿಸುತ್ತಿದೆ. ಇದೇ ಸಂಧರ್ಭದಲ್ಲಿ ಮದ್ಯಪಾನದ ದುರಂತಗಳ ಕುರಿತು ಅರಿವು ಮೂಡಿಸುವಿಕೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ವಿಚಾರ ಸಂಕಿರಣ, ಪಾನಮುಕ್ತರಿಗೆ ಅಭಿನಂದನೆ, ನವಜೀವನ ಸಾಧಕರಿಗೆ ಸನ್ಮಾನ, ಹೀಗೆ ಸಮಾಜದ ಗಣ್ಯರನ್ನು ಈ ಚಳುವಳಿಯತ್ತ ಗಮನ ಸೆಳೆಯುವುದು ಹಾಗೂ ಮದ್ಯಮುಕ್ತ ಭಾರತಕ್ಕಾಗಿ ಆಗ್ರಹಿಸುವುದಾಗಿದೆ. ಈ ಬಾರಿ ವಿಶೇಷವಾಗಿ ಗಾಂಧೀಜಿಯವರ ಜನ್ಮ ಜಯಂತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ 31 ಜಿಲ್ಲೆಗಳಲ್ಲಿ ‘ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ” ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ವಿಚಾರ ಧಾರೆಗಳ ಕುರಿತಂತೆ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತರ ಸಮಾವೇಶ, ಮಹಿಳಾ ಸಮಾವೇಶ, ವ್ಯಸನಮುಕ್ತರಿಗೆ ಅಭಿನಂದನೆ, ಶಾಲಾ ಮಕ್ಕಳಿಗೆ ತಾಲೂಕು/ಜಿಲ್ಲಾ ಮಟ್ಟದ ಚರ್ಚಾಗೋಷ್ಠಿ, ಸಾಧಕ ವ್ಯಸನ ಮುಕ್ತರಿಗೆ ‘ಜಾಗೃತಿ ಅಣ್ಣ’ ಮತ್ತು ‘ಜಾಗೃತಿ ಮಿತ್ರ’ ಪ್ರಶಸ್ತಿ, ಗ್ರಾಮ ಮಟ್ಟದಲ್ಲಿ ಪ್ರೇರಕರ ತರಬೇತಿ, ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರಿಗೆ ಗಾಂಧೀಜಿಯ ವಿಚಾರ ಧಾರೆಗಳನ್ನು ಹಾಗೂ ವ್ಯಸನಮುಕ್ತ ಭಾರತದ ಕನಸು ಕಂಡಿರುವ ಮಹಾತ್ಮ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸುವ ದೃಷ್ಟಿಯಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ತಿಮ್ಮಯ್ಯ ನಾಯ್ಕ್, ಮೋಹನ್ ಕೆ., ಮೇಲ್ವಿಚಾರಕರಾದ ನಂದ ಕುಮಾರ್, ಹರೀಶ್ ಉಪಸ್ಥಿತರಿದ್ದರು.