ಧರ್ಮಸ್ಥಳ: ಭಜನೆಯಿಂದ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಾಮಾಜಿಕ ಪರಿವರ್ತನೆಯಾಗುತ್ತದೆ. ಉತ್ತಮ ನಾಯಕತ್ವದೊಂದಿಗೆ ದುಶ್ಚಟ ಮುಕ್ತವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಹಾಗೂ ಹೇಮಾವತಿ ಹೆಗ್ಗಡೆಯವರ ಕಲ್ಪನೆ ಮತ್ತು ಮಾರ್ಗದರ್ಶನದೊಂದಿಗೆ 22 ವರ್ಷಗಳಿಂದ ಯುವ ಜನತೆಯಲ್ಲಿ ಸನಾತನ ಸಂಸ್ಕೃತಿ, ಸಂಸ್ಕಾರಗಳ ಮಾನವೀಯ ಗುಣಗಳನ್ನು ಬೆಳೆಸುವ ಭಜನಾ ಕಮ್ಮಟದ ಆಯೋಜನೆ ಮಾಡುತ್ತಿದ್ದಾರೆ. ಇದರಿಂದ ಒಬ್ಬ ಜನ ಸಾಮಾನ್ಯನಲ್ಲಿಯೂ ನಾಯಕತ್ವದ ಗುಣವನ್ನು ಬೆಳೆಸಲು ಭಜನಾ ಕಮ್ಮಟದಿಂದ ಸಾಧ್ಯವಾಗಿದೆ. ಸದಾ ಸತ್ಯವನ್ನೇ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆದಾಗ ಋಣಾತ್ಮಕ ಭಾವನೆಗಳು ದೂರವಾಗಿ, ಧನಾತ್ಮಕ ಚಿಂತನೆಗಳು ಮೂಡಿ ಬರುತ್ತವೆ. ಭಜನಾ ಕಮ್ಮಟ ಪ್ರಾರಂಭವಾದಾಗಿನಿಂದ ಸಮಾಜದಲ್ಲಿ ಹಲವು ರೀತಿಯ ಬದಲಾವಣೆಗಳು ಆಗಿದೆ. ಭಜನೆಯ ಮೂಲಕ ಭಕ್ತಿಯ ಪರಾಕಾಷ್ಠೆಯೊಂದಿಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಮಕ್ಕಳಿಗೆ ಭಜನಾ ಸಂಸ್ಕೃತಿಯ ತರಬೇತಿಯನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಶುಭಾಶಂಸನೆಗೈದು, ಯುವ ಜನತೆ ಧರ್ಮದ ಮರ್ಮವನ್ನು ಅರಿತು ಆಚರಣೆ ಮಾಡಬೇಕು. ಸನಾತನ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದರು.
ಹಿಂದೂ ಧರ್ಮ ವಿಶಾಲ ಮನೋಧರ್ಮ ಹೊಂದಿದ್ದು, ಧರ್ಮವು ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಮಾನವೀಯ ಮೌಲ್ಯವನ್ನು ಸಾರುವ ಸನಾತನ ಹಿಂದೂ ಧರ್ಮಕ್ಕೆ ನಾವು ದಾರಿ ತಪ್ಪಿದಾಗ ಸರಿ ದಾರಿಗೆ ತರುವ ಶಕ್ತಿಯಿದೆ. ನಮ್ಮ ಆರಾಧನಾ ಪದ್ದತಿ ಬೇರೆ ಧರ್ಮಕ್ಕಿಂತ ಉತ್ತಮವಾಗಿದೆ. ನಮ್ಮ ಧರ್ಮದಲ್ಲಿ ಮಾತ್ರ ನಮಗೆ ಬೇಕಾದ ದೇವರನ್ನು ಸೃಷ್ಟಿ ಮಾಡುವ ಸ್ವಾತಂತ್ರ್ಯವಿದೆ. ಜೊತೆಗೆ ಮಹಿಳೆಯರಿಗೆ ಆರಾಧನಾ ಸ್ವಾತಂತ್ರ್ಯ ನೀಡಿದೆ. ದೇವರನ್ನು ತಲುಪುವಂತಹ ಸುಲಭ ದಾರಿ ಭಜನೆ. ಸಂದರ್ಭಕ್ಕೆ ಸರಿಯಾಗಿ ಭಜನೆ ಹಾಡಬೇಕು. ರಾಗ, ತಾಳ, ಲಯ ಬದ್ಧವಾದ ಭಜನೆಗಳನ್ನು ಶ್ರದ್ಧಾ-ಭಕ್ತಿಯಿಂದ ಹಾಡಿ, ಕೇಳಿ ಅದರ ಸೊಗಡನ್ನು ಆಸ್ವಾದಿಸಿ ಅನುಭವಿಸಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ನಾಡು ಮೆಚ್ಚುವಂತಹ ಕಾಯಕವನ್ನು ಮಾಡುತ್ತಿದ್ದಾರೆ. ದೇವಸ್ಥಾನಗಳ ಪುನರ್ ನಿರ್ಮಾಣ, ಭಜನಾ ಮಂದಿರಗಳಿಗೆ ಸಹಕಾರ, ಮದ್ಯವರ್ಜನ ಶಿಬಿರ, ಮಹಿಳಾ ಸಬಲೀಕರಣ, ಯುವ ಜನತೆಗೆ ಸ್ವಉದ್ಯೋಗ ತರಬೇತಿ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.
ವಿಶೇಷತೆ:
22 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟ ಧರ್ಮಾಧಿಕಾರಿ ಡಾ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಪ್ರಸ್ತುತ ವರ್ಷ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಿಂದ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಶ್ರೀ ಧ. ಗ್ರಾಮಾಭಿವೃದ್ಧಿ ಯೋಜನೆ ಮತ್ತು ಭಜನಾ ಪರಿಷತ್ ವತಿಯಿಂದ ಭಜನಾ ಮಂಡಳಿ ಹಾಗೂ ಶಿಬಿರಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಆನ್ ಲೈನ್ ಮೂಲಕ ನೋಂದಾವಣೆ ಮಾಡಲಿಕೊಳ್ಳಲಾಗಿದೆ. ಪ್ರಸ್ತುತ ಭಜನಾ ಕಮ್ಮಟಕ್ಕೆ 128 ಭಜನಾ ಮಂಡಳಿಯ 212 ಸದಸ್ಯರ ನೋಂದಣಿ ಮಾಡಲಾಗಿದ್ದು, ಇದರಲ್ಲಿ 137 ಪುರುಷರು ಹಾಗೂ 75 ಮಹಿಳಾ ಶಿಬಿರಾರ್ಥಿಗಳಿದ್ದಾರೆ.
ಧರ್ಮಸ್ಥಳದಲ್ಲಿ 22 ವರ್ಷದಲ್ಲಿ ಇದುವರೆಗೆ 2059 ಮಂಡಳಿಯ 7205 ಮಂದಿಗೆ ತರಬೇತಿ ನೀಡಲಾಗಿದೆ. ಭಜನಾ ಮಂಗಲೋತ್ಸವದಲ್ಲಿ ಇದುವರೆಗೆ ನಾಡಿನ ಸುಮಾರು 6837ಕ್ಕೂ ಅಧಿಕ ಭಜನಾ ಮಂಡಳಿ ಒಂದು ಲಕ್ಷಕ್ಕೂ ಹೆಚ್ಚು ಭಜಕರು ಭಾಗವಹಿಸಿದ್ದಾರೆ. ಭಜನಾ ತರಬೇತಿ ಕಮ್ಮಟ ಏಳು ದಿನಗಳಲ್ಲಿ ನಡೆಯಲಿದೆ. ಪ್ರತಿ ದಿನ ಯೋಗಾಭ್ಯಾಸ, ಪ್ರಾರ್ಥನೆ, ವ್ಯಾಯಾಮ, ಧ್ಯಾನ, ನೃತ್ಯ ಭಜನೆ, ತಜ್ಞರಿಂದ ವಿಶೇಷ ಉಪನ್ಯಾಸ, ಶೋಭಾನೆ ಹಾಡುಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಬಿ.ಜಯರಾಮ ನೆಲ್ಲಿತ್ತಾಯ, ಕಮ್ಮಟದ ಕೋಶಾಧಿಕಾರಿ ಧರ್ಣಪ್ಪ ಡಿ. ಉಪಸ್ಥಿತರಿದ್ದರು.
ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಸ್ತಾವಿಸಿ, ಸ್ವಾಗತಿಸಿದರು. ನೈತಿಕ ಶಿಕ್ಷಣ ಮತ್ತು ಯೋಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಸ್ವಸ್ತಿ ಮಂತ್ರ ಪಠಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿ, ಮಮತಾ ರಾವ್ ವಂದಿಸಿದರು.