ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಸಲಗದ ಸವಾರಿ!: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ‌ವೈರಲ್: ಮುಂಡಾಜೆ ಸುತ್ತಮುತ್ತಲಿನ ಪರಿಸರದಲ್ಲಿ‌ ಅಹರ್ನಿಶಿ ಅಲೆದಾಟ

 

 

 

ಬೆಳ್ತಂಗಡಿ: ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮುಂಡಾಜೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಸುಜಿತ್ ಭಿಡೆ, ಅಶೋಕ್ ಮೆಹೆಂದಳೆ, ಅಭಿಷೇಕ್ ಮರಾಠೆಯವರ ಮನೆಗಳ ಪ್ರದೇಶದಿಂದ ಇಳಿದುಬಂದ ಒಂಟಿ‌ ಸಲಗ ಹೆದ್ದಾರಿಯಲ್ಲಿ ಸವಾರಿ ನಡೆಸಿದ್ದು, ಹಾಲ್ತೋಟದ ಕಡೆ ತೆರಳಿ, ಬೆಳಗ್ಗೆ 8 ಗಂಟೆ ಸುಮಾರಿಗೆ ಸಚಿನ್ ಭಿಡೆ, ಶಶಿಧರ ಖಾಡಿಲ್ಕರ್ ಅವರ ತೋಟಗಳಿಂದ ಸಂಚರಿಸಿ ಮೇಲ್ಭಾಗದ ಕಾಡಿನ ಕಡೆ ತೆರಳಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಅದೇ ರೀತಿ ಕಾಡಾನೆ ರಾಷ್ಟ್ರೀಯ ಹೆದ್ದಾರಿ ಕಡೆ ತೆರಳುವ ದೃಶ್ಯವನ್ನು ಸ್ಥಳೀಯರಾದ ಸಹನಾ ಭಿಡೆಯವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

 

ಸಲಗದ ಅಲೆದಾಟ:
ತಾಲೂಕಿನ ಮುಂಡಾಜೆ, ಕಲ್ಮಂಜ ಗ್ರಾಮಗಳ ಪರಿಸರದ ಸುಮಾರು 15 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆ ತನಕ ತಿರುಗಾಟ ನಡೆಸಿರುವ ಸಲಗದಿಂದ ಜನತೆ ಭಯಭೀತರಾಗಿದ್ದಾರೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಕಲ್ಮಂಜ ಗ್ರಾಮದ ಸತ್ಯನಫಲಿಕೆಯ ಹರೀಶ್ ಕೊಳ್ತಿಗೆ ಅವರ ತೋಟದಲ್ಲಿ ಕಾಡಾನೆ ಬಾಳೆಗಿಡ, ಅಡಕೆ ಗಿಡಗಳಿಗೆ ಹಾನಿ ಉಂಟು ಮಾಡಿದ್ದು, ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ಓಡಿಸಲಾಯಿತು. ಬಳಿಕ ಆನಂಗಳ್ಳಿ ಪರಿಸರದ ಸತೀಶ್ ಭಿಡೆ ಹಾಗೂ ಇತರರ ತೋಟದಲ್ಲಿ‌ ಸಂಚಾರ ನಡೆಸಿದೆ. ಬಳಿಕ ಮೃತ್ಯುಂಜಯ ನದಿ ದಾಟಿ ಇದೇ ಗ್ರಾಮದ ಕುಡೆಂಚಿ ಪರಿಸರದ ಜಯಂತ ಪಟವರ್ಧನ್, ಸುಬ್ರಾಯ ಪಟವರ್ಧನ್, ಶಂಕರ ಪಟವರ್ಧನ್ ಮೊದಲಾದವರ ತೋಟಗಳಿಗೂ‌ ತೆರಳಿದೆ. ಇದೇ ಪ್ರದೇಶದ ಇನ್ನೊಂದು ಭಾಗದ ನೇತ್ರಾವತಿ ನದಿ ತೀರದಲ್ಲಿರುವ ಸಂತೋಷ್ ಹೆಬ್ಬಾರ್ ಅವರ ತೋಟಕ್ಕೂ ತೆರಳಿದೆ. ಎರಡು ನದಿಗಳು ಸೇರುವ ಪಜಿರಡ್ಕ ಪರಿಸರದಲ್ಲೂ ಕಾಡಾನೆ ತಿರುಗಾಟ ನಡೆಸಿದೆ.

 

 

ಕಾರ್ಯಾಚರಣೆ:
‌ಸುಮಾರು 10 ದಿನಗಳಿಂದ ಮುಂಡಾಜೆ ಪರಿಸರದಲ್ಲಿ ಕಾಡಾನೆ ಸುತ್ತಾಟ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮೌನವಾಗಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣದಿಂದ ಸ್ಥಳೀಯರ ಸಹಕಾರದಲ್ಲಿ ಇಲಾಖೆಯ ವತಿಯಿಂದ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದಕ್ಕೆ ಬೇಕಾದ ವಾಹನ ಹಾಗೂ ಅಗತ್ಯ ಸಲಕರಣೆಗಳನ್ನು ನೀಡುವುದಾಗಿಯೂ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

 

error: Content is protected !!