ಸೆ. 27ರ ಭಾರತ್ ಬಂದ್: ಬೆಳ್ತಂಗಡಿ ಕರ್ನಾಟಕ ಪ್ರಾಂತ ರೈತ ಸಂಘ , ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಂಬಲ

 

 

 

ಬೆಳ್ತಂಗಡಿ: ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯಲ್ಲಿ ಕಳೆದ 10 ತಿಂಗಳಿನಿಂದ ನಡೆಯುತ್ತಿರುವ ಐತಿಹಾಸಿಕ ನಿರಂತರ ಚಳವಳಿಯನ್ನು ಬೆಂಬಲಿಸಿ ಸಂಯುಕ್ತ ಕಿಸಾನ್ ಮೊರ್ಚಾ ಕರೆ ನೀಡಿರುವ ಸೆಪ್ಟೆಂಬರ್ 27 ರ ಭಾರತ್ ಬಂದ್ ಗೆ ಕರ್ನಾಟಕ ಪ್ರಾಂತ ರೈತ ಸಂಘ , ಸಿಐಟಿಯು , ದಲಿತ ಹಕ್ಕುಗಳ ಸಮಿತಿ , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿಗಳು ಬೆಂಬಲ ಸೂಚಿಸಿದೆ‌‌.
ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಕಳೆದ 10 ತಿಂಗಳಿಂದ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಐತಿಹಾಸಿಕ ಹೋರಾಟ ನಡೆಯುತ್ತಿದ್ದರೂ ಒಕ್ಕೂಟ ಸರ್ಕಾರವು ನಿರ್ಲಕ್ಷಿಸುತ್ತಿದೆ. ದೇಶದ 135 ಕೋಟಿ ಅನ್ನ ನೀಡುವ ಅನ್ನದಾತರ ಸಮಸ್ಯೆಗಳನ್ನು ಈಡೇರಿಸುವ ಬದಲಾಗಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದಿರುವ ಜಂಟಿ ಸಂಘಟನೆಗಳ ಮುಖಂಡರು ಈ ಐತಿಹಾಸಿಕ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಶ್ಲಾಘಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನಾತ್ಮಕಗೊಳಿಸಬೇಕು, ಕಾರ್ಮಿಕ ಮಸೂದೆಗಳನ್ನು ಹಿಂಪಡೆಯಬೇಕು, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು, ಡಿಸಿ ಮನ್ನಾ ಜಮೀನು ಅರ್ಹ ಫಲಾನುಭವಿಗಳಿಗೆ ನೀಡಲು ಒತ್ತಾಯಿಸಿ, ಆದಿವಾಸಿ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಹಾಗೂ ನಗದೀಕರಣದ ಹೆಸರಿನಲ್ಲಿ ದೇಶೀಯ ಸಂಪತ್ತನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವುದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೊರ್ಚಾ ಸೆಪ್ಟೆಂಬರ್ 27 ರಂದು ಕರೆ ನೀಡಿರುವ ಭಾರತ್ ಬಂದ್ ನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ಹೋರಾಟದ ಭಾಗವಾಗಿ ಬಿ.ಸಿ ರೋಡ್ ನ ನಾರಾಯಣ ಗುರು ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಹರಿದಾಸ್ ಎಸ್. ಎಂ., ಸೆಲಿಮೋನ್ ಪುದುವೆಟ್ಟು , ಸಿಐಟಿಯುನ ಶಿವಕುಮಾರ್ ಎಸ್. ಎಂ., ವಸಂತ ನಡ, ದಲಿತ ಹಕ್ಕುಗಳ ಸಮಿತಿಯ ಶೇಖರ್ ಲಾಯಿಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಯಾನಂದ ಪಿಲಿಕಲ ತಿಳಿಸಿದ್ದಾರೆ.

error: Content is protected !!