ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ನಿಡ್ಲೆ ಗ್ರಾಮದ ಮಾಡಂಕಲ್ಲು ಬಳಿ ನಡೆದಿದೆ.
ಮನೆಯ ಮಾಲಿಕರಾದ ಗಣೇಶ್ ಗೌಡ ಅವರು ಸೆ.8ರಂದು ಪತ್ನಿ ಹಾಗೂ ಮಕ್ಕಳ ಜೊತೆ, ಪತ್ನಿಯ ತವರು ಮನೆ ಕಿಲ್ಲೂರು ಸಮೀಪದ ಬಂಗಾಡಿಗೆ ತೆರಳಿದ್ದರು. ಗಣೇಶ್ ಅವರ ತಾಯಿಯನ್ನು ಪಕ್ಕದ ಮನೆಯ ಚಂದಪ್ಪ ಅವರ ಮನೆಯಲ್ಲಿ ತಂಗುವಂತೆ ತಿಳಿಸಿ, ತೆರಳಿದ್ದು, ಅವರ ತಾಯಿ ರಾತ್ರಿ ಮನೆಗೆ ಬೀಗ ಹಾಕಿ ಚಂದಪ್ಪ ಅವರ ಮನೆಯಲ್ಲಿದ್ದರು. ಮರುದಿನ ಬೆಳಗ್ಗೆ ಅಂದರೆ ಸೆ.9ರಂದು ಮನೆಗೆ ಆಗಮಿಸಿದಾಗ ಮನೆಯ ಮುಂಭಾಗದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಹಾಗೂ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯೊಳಗೆ ತೆರಳಿದಾಗ ಕೋಣೆಯ ಕಪಾಟಿನ ಬೀಗವನ್ನೂ ಮುರಿದು, ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಇಟ್ಟಿದ್ದ 6 ಪವನ್ ಚಿನ್ನ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟು 1,75,000 ರೂ. ಮೌಲ್ಯದ ಚಿನ್ನಾಭರಣ ಕಳವಾಗಿರಬಹುದು ಎಂದು ಅಂದಾಜಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳಾದ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವೆಲಂಟೈನ್ ಡಿಸೋಜಾ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವ ಕುಮಾರ್, ಧರ್ಮಸ್ಥಳ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು ಕೃಷ್ಣಕಾಂತ ಪಾಟೀಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.