ಬೈಕ್,ಟಿವಿ, ಫ್ರಿಡ್ಜ್ ಇರುವ ಮನೆಗಳ ಬಿಪಿಎಲ್ ಕಾರ್ಡ್ ರದ್ದು ಇಲ್ಲ. ಆಹಾರ ಮತ್ತು ನಾಗರಿಕಾ ಪೊರೈಕೆ ಇಲಾಖೆ ಸ್ಪಷ್ಟನೆ.

 

ಬೆಂಗಳೂರು : ಬೈಕ್​, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವ ಮನೆಗಳ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರಾಜ್ಯದಲ್ಲಿ‌ ರದ್ದುಪಡಿಸಿರುವುದಿಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟನೆ ನೀಡಿದೆ.

ಬೈಕ್​, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವವರ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ಸರ್ಕಾರ ರದ್ದುಪಡಿಸಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ‌ ಹಿನ್ನೆಲೆ, ಇಲಾಖೆ ಈ ಸ್ಪಷ್ಟೀಕರಣ ನೀಡಿದೆ.ಬೈಕ್​, ಟಿವಿ, ಫ್ರಿಡ್ಜ್ ಹೊಂದಿರುವ ಕುಟುಂಬಗಳು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಲು ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳಲ್ಲಿ ಅವಕಾಶವಿದೆ. ಬೈಕ್​, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವರೆಂಬ ಕಾರಣಕ್ಕೆ ರಾಜ್ಯದಲ್ಲಿ ಅಂತ್ಯೋದಯ, ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಆಧಾರರಹಿತವಾಗಿದೆ. ಇಂಥ ಯಾವುದೇ ನಿರ್ದೇಶನ ಅಥವಾ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗಳಿಗೆ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ರಾಜ್ಯದಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅನರ್ಹ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಂತಹ ಅನರ್ಹ ಕುಟುಂಬಗಳಿಂದ ಸಂಸ್ಥೆಯಿಂದ ಪಡಿತರ ಚೀಟಿಗಳನ್ನು ಹಿಂತಿರುಗಿಸಲು ಸೂಚಿಸಲಾಗಿದೆ. ಜೊತೆಗೆ ವಿವಿಧ ರೀತಿಯ ಪರಿಶೀಲನೆಗಳಿಂದ ಅನರ್ಹರನ್ನು ಪತ್ತೆ ಮಾಡಿ ಆದ್ಯತೇತರ ಕುಟುಂಬಗಳಿಗೆ (ಎಪಿಎಲ್) ವರ್ಗಾಯಿಸಲಾಗುತ್ತಿದೆ ಎಂದು ತಿಳಿಸಿದೆ.ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು ವಾರ್ಷಿಕ ಆದಾಯ ರೂ.1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ ಕುಟುಂಬಗಳ ಅನರ್ಹತೆಯನ್ನು ನಿರ್ಧರಿಸಿ, ಆದ್ಯತೇತರ ವರ್ಗಕ್ಕೆ (ಎಪಿಎಲ್) ಪರಿವರ್ತಿಸುವ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪರಿಶೀಲನೆ ಇನ್ನೂ ಪ್ರಗತಿಯಲ್ಲಿದೆ ಎಂದು ವಿವರಿಸಿದೆ.

ಜೊತೆಗೆ ಆದಾಯ ತೆರಿಗೆ ಇಲಾಖೆ ಮತ್ತು ವಾರ್ಷಿಕ ವರಮಾನ ಹಾಗೂ ಇತರೆ ಕಾರಣಗಳಿಗಾಗಿ ಆದ್ಯತೇತರ ಕುಟುಂಬಕ್ಕೆ ವರ್ಗಾಯಿಸಲ್ಪಟ್ಟ ಕೆಲವು ಕುಟುಂಬಗಳು ಈ ವಿಷಯವಾಗಿ ಸಲ್ಲಿಸುವ ಮನವಿಗಳನ್ನು ಸಹ ಮರು ಪರಿಶೀಲಿಸಿ, ಅರ್ಹ ಕುಟುಂಬಗಳನ್ನು ಆದ್ಯತಾ ಕುಟುಂಬಗಳಾಗಿ ಮುಂದುವರೆಸಲು ಜಿಲ್ಲಾಧಿಕಾರಿಗಳಿಗೆ ಕಾಲ ಕಾಲಕ್ಕೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದೆ.ಯಾವುದೇ ಅರ್ಹ ಕುಟುಂಬಗಳ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಯಾವುದೇ ಅಧಿಕಾರಿ ಆಧಾರ ರಹಿತವಾಗಿ ರದ್ದುಪಡಿಸಿದರೆ ಅಥವಾ ಆದ್ಯೇತರಕ್ಕೆ ಪರಿವರ್ತಿಸಿದರೆ, ಅಂತಹ ಕುಟುಂಗಳು ತಾಲೂಕಿನ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಅಥವಾ ಆಹಾರ ಇಲಾಖೆ ಜಂಟಿ/ಉಪ ನಿರ್ದೇಶಕರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಅಂತಹ ಕುಟುಂಬಗಳಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!