ಬೆಳ್ತಂಗಡಿ: ಸೊಳ್ಳೆಗಳಿಂದ ಬರುವ ಗಂಭೀರ ರೋಗಗಳು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಇರುವ ಕಾರಣ ಸೊಳ್ಳೆ ಉತ್ಪತ್ತಿ ತಡೆಗೆ ಸಾರ್ವಜನಿಕರು ಗಮನಹರಿಸಬೇಕು. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ, ಸ್ವಚ್ಛವಾದ ನೀರಿನಲ್ಲೂ ಸೊಳ್ಳೆ ಮೊಟ್ಟೆ ಇಡಬಲ್ಲದು. ನಾವು ಕುಡಿಯುವ ನೀರಿನ ಬಾಟಲ್ ಒಳಗೆ ನೀರಿದ್ದು, ಹಲವು ದಿನಗಳ ಕಾಲ ತೆರೆದು ಇಟ್ಟರೆ ಅಲ್ಲಿಯೂ ಸೊಳ್ಳೆಗಳು ಮೊಟ್ಟೆ ಇಟ್ಟು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆಯಿದೆ ಎಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾಹಿತಿ ನೀಡಿದರು.
ಅವರು ತಾಲೂಕು ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಮಲೇರಿಯಾ/ ಡೆಂಘೆ ವಿರೋಧಿ ಮಾಸಾಚರಣೆ ಅಂಗವಾಗಿ ಇದರ ನಿಯಂತ್ರಣ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇದೀಗ ಜನತೆ ಕೊರೋನಾ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾ ಕುರಿತು ಮುನ್ನೆಚ್ಚರಿಕೆ ಅಗತ್ಯ, ಆದರೆ ಕೊರೋನಾಗಿಂತಲೂ ಕೊರೊನಾಗಿಂತಲೂ ಡೆಂಘೆ, ಮಲೇರಿಯಾ, ಝೀಕಾ ಮೊದಲಾದ ಸೊಳ್ಳೆಯಿಂದ ಹರಡುವ ರೋಗಗಳು ಅಪಾಯಕಾರಿ. ಕೊರೋನಾದಿಂದ ಪಾರಾಗಲು ಲಸಿಕೆ ಲಭ್ಯವಿದೆ, ಆದರೆ ಸೊಳ್ಳೆಯಿಂದ ಉಂಟಾಗುವ ಡೆಂಘೆಯಂತಹಾ ರೋಗ ತಡೆಗಟ್ಟಲು ಲಸಿಕೆಯೂ ಲಭ್ಯವಿಲ್ಲ. ಔಷಧವೂ ಇಲ್ಲ, ಅರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಧ್ಯ ಈ ವರ್ಷ ರೋಗ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ಪ್ರತೀ ಎರಡು ವರ್ಷಗಳಿಗೊಮ್ಮೆ ಈ ಮಲೇರಿಯಾ, ಡೆಂಘೆ ಮೊದಲಾದವುಗಳು ಉಲ್ಬಣಗೊಳ್ಳುತ್ತದೆ, ಆದ್ದರಿಂದ ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಪದೇ ಪದೆ ಜ್ವರ ಬರುವುದು, ಮೈಕೈ ನೋವು ಮೊದಲಾದ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ರಕ್ತಪರೀಕ್ಷೆ ಮಾಡುವುದು ಅಗತ್ಯ. ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಾ ವೆಚ್ಚ ಹಾಗೂ ಮಲೇರಿಯಾದಂತಹ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಇದರ ಪ್ರಯೋಜನ ಪಡೆಯಬೇಕು. ಮನೆಯಿಳಗೆ ಸೊಳ್ಳೆ ಬಾರದಂತೆ ಪರದೆ ಅಳವಡಿಕೆ, ತೋಟಗಳಲ್ಲಿ ನೀರು ನಿಲ್ಲದಂತೆ, ಮನೆ ಟೆರೇಸ್ ಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಆಶಾ ಕಾರ್ಯಕರ್ತೆಯರು ಲಾರ್ವಾ ಸರ್ವೇ ನಡೆಸಿ ಜನತೆಯಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನತೆಯೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಾಲೂಕು ಆಸ್ಪತ್ರೆಯ ಲೀಲಾವತಿ, ಪುಷ್ಪ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಜಾರಪ್ಪ ಉಪಸ್ಥಿತರಿದ್ದರು.
ಅಜಯ್ ನಿರೂಪಿಸಿದರು.