ಬೆಳ್ತಂಗಡಿ: ಗುರುವಾಯನಕೆರೆ ಕಾರ್ಕಳ ರಸ್ತೆಯಲ್ಲಿ ಕೆರೆಯ ಬಳಿ ಹೆದ್ದಾರಿಯಲ್ಲಿ ಇನ್ನೊಂದು ಕೆರೆ
ಸೃಷ್ಟಿಯಾಗಿದೆ. ಭಾರಿ ಗಾತ್ರದ ಹೊಂಡ-ಗುಂಡಿಗಳು ನಿರ್ಮಾಣಗೊಂಡಿವೆ. ಈ ಮರಣ ಗುಂಡಿಗಳು ಅವಘಡಕ್ಕೆ ಕಾರಣವಾಗುತ್ತಿದ್ದು , ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಗುರುವಾಯನಕೆರೆ ಪೇಟೆಯಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣಗೊಂಡಿದ್ದು, ಇವುಗಳಲ್ಲಿ ಮಳೆನೀರು ತುಂಬಿದಾಗ ಗುಂಡಿಯ ಆಳ ತಿಳಿಯದೇ ಅಪಘಾತಗಳು ನಿತ್ಯ ಎಂಬಂತಾಗಿವೆ. ಈ ಹೊಂಡಗಳಲ್ಲಿ ನೀರು ಕಟ್ಟಿ ನಿಂತಾಗ ಎಷ್ಟು ಆಳವಿದೆ ಎಂಬ ಬಗ್ಗೆ ಅರಿವಿಗೆ ಬಾರದೇ ದ್ವಿಚಕ್ರ ಹಾಗೂ ಇತರ ಸಹಿತ ಸಣ್ಣಪುಟ್ಟ ವಾಹನಗಳು ಬಿದ್ದು ಸವಾರರು ಗಾಯಗೊಳ್ಳುತ್ತಿರುವ ಘಟನೆಗಳು ನಿತ್ಯ ನಡೆಯಲು ಆರಂಭವಾಗಿದೆ. ನಿತ್ಯ ಪ್ರಯಾಣಿಕರು ಹೊಂಡ ಗುಂಡಿಗಳ ಮೇಲಿನ ಪ್ರಯಾಣದಿಂದಾಗಿ ಸುಸ್ತಾಗುತ್ತಿದ್ದಾರೆ . ರಾತ್ರಿ ಹೊತ್ತಲ್ಲಂತೂ ಪರಿಸ್ಥಿತಿ ಕೇಳದಂತಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಲ್ಲಿಯ ವಿಚಾರದಲ್ಲಿ ಸಮರ್ಪಕ ಯೋಜನೆ ರೂಪಿಸುತ್ತಿಲ್ಲ ಎಂದು ಸಾರ್ವಜನಿಕರ ಆರೋಪಿಸುತ್ತಿದ್ದಾರೆ.ಅದಲ್ಲದೇ ಅಧಿಕಾರಿಗಳ ಗಮನಕ್ಕೆ ಈ ಬಗ್ಗೆ ತಂದಾಗ ಮಳೆ ಕಡಿಮೆಯಾಗದೇ ದುರಸ್ತಿ ಕಷ್ಟ ಸಾಧ್ಯ ಎಂಬ ಉತ್ತರ ಬರುತ್ತಿದೆ. ಮಳೆ ಕಡಿಮೆ ಇದ್ದಾಗ ದುರಸ್ತಿಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ವಾಹನ ಸವಾರರು ಅಸಾಮಾಧಾನ ಹೊರ ಹಾಕಿದ್ದಾರೆ.
ಅದಲ್ಲದೇ ಉಪ್ಪಿನಂಗಡಿ ಹೆದ್ದಾರಿಯಲ್ಲೂ ಇದೆ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ನಡೆಸುತ್ತಿವೆ. ಕೆಲವು ವಾಹನಗಳು ಹೊಂಡ ತಪ್ಪಿಸುವ ಭರದಲ್ಲಿ ಹಾಗೂ ಇನ್ನು ಕೆಲವು ವೇಗವಾಗಿ ಸಂಚರಿಸುವ ಸಂದರ್ಭದಲ್ಲಿ ಮತ್ತೊಂದು ವಾಹನಗಳಿಗೆ ಡಿಕ್ಕಿ ಹೊಡೆಯುವ ಘಟನೆಗಳು ಸಂಭವಿಸಿದ್ದೂ ಇವೆ. ಅಲ್ಲದೆ ಹೊಂಡ-ಗುಂಡಿಗಳನ್ನು ತಪ್ಪಿಸಲು ಚಾಲಕರು ಹರಸಾಹಸಪಡಬೇಕಾಗಿದೆ. ಈ ಮಧ್ಯೆ ಸಂಚರಿಸುತ್ತಿರುವಾಗ ವಾಹನಗಳ ಚಕ್ರಗಳು ಹೊಂಡಗಳಿಗೆ ಬಿದ್ದೇಳುವಾಗ ಪಾದಚಾರಿಗಳಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹೆದ್ದಾರಿಯನ್ನು ದುರಸ್ತಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಜತೆಗೆ ಸಂಭವನೀಯ ದುರಂತಗಳನ್ನು ತಪ್ಪಿಸುವ ಕುರಿತು ಗಮನಹರಿಸಬೇಕಾಗಿದೆ.ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.