ಧರ್ಮಸ್ಥಳ: 75ನೇ ಸ್ವಾತಂತ್ರ‍್ಯ ಸಂಭ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ. ಕ್ಷೇ.ಧ.ಗ್ರಾ. ಯೋಜನೆಯ ಮೂಲಕ ಕರ್ನಾಟಕ ರಾಜ್ಯದಾದ್ಯಂತ “ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮದಡಿಯಲ್ಲಿ “ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಎಂಬ ದಿಟ್ಟ ನಿಲುವಿನೊಂದಿಗೆ 75000 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ ಎಂದು ಗ್ರಾಮಾಭಿವೃದ್ದಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಸ್ವಚ್ಛತಾ ಆಂದೋಲನದ ಕುರಿತು ವಿಶೇಷವಾದ ಕಾಳಜಿ ವಹಿಸಿ 2009ರಲ್ಲಿ ಸಮೂಹ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದರು. ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ಮಾರುಕಟ್ಟೆ, ರಸ್ತೆಗಳಲ್ಲಿ ಈ ಸ್ವಚ್ಛತಾ ಅಭಿಯಾನ ಪ್ರಾರಂಭಗೊಂಡು ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದರು. ಈ ಯಶಸ್ವಿ ಅಭಿಯಾನವನ್ನು 2019ರಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ವಿಸ್ತರಿಸಿ, ಪ್ರತಿ ವರ್ಷ ಜನವರಿ ತಿಂಗಳ ಮಕರ ಸಂಕ್ರಾಂತಿ ದಿನ ಹಾಗೂ ಆಗಸ್ಟ್ 15 ರ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಆಯಾ ಊರಿನ ದೇಗುಲಗಳು ಹಾಗೂ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯನ್ನು ಕೈಗೊಳ್ಳುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮದಡಿಯಲ್ಲಿ “ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶ ನೀಡಲಾಗಿದೆ. ಪ್ರತಿ ವರ್ಷ ಸ್ವಾತಂತ್ರ‍್ಯ ದಿನಾಚರಣೆಯ ಒಂದು ವಾರದ ಮೊದಲ್ಗೊಂಡು ರಾಜ್ಯದಾದ್ಯಂತ ಈ ಸ್ವಚ್ಛತಾ ಅಭಿಯಾನವು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಯೋಜನೆಯ ಕಾರ್ಯಕರ್ತರು, ಸದಸ್ಯರು ಹಾಗೂ ಸ್ವಯಂಸೇವಕರು ಈ ಒಂದು ವೈಶಿಷ್ಟ್ಯಪೂರ್ಣ ಸ್ವಚ್ಛತಾ ಅಭಿಯಾನದಲ್ಲಿ ತಮ್ಮ ತಮ್ಮ ಊರುಗಳಲ್ಲಿನ ದೇವಾಲಯ, ಮಂದಿರ ಹಾಗೂ ಇತರ ಶ್ರದ್ದಾ ಕೇಂದ್ರಗಳ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದಾರೆ.
ನಮ್ಮ ದೇಶವು 75ನೇ ಅಮೃತ ಸ್ವಾತಂತ್ರ‍್ಯ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ಯೋಜನೆಯ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೆ ಸುಮಾರು 75000 ಕ್ಕೂ ಮಿಕ್ಕಿದ ದೇಗುಲಗಳು, ಮಂದಿರಗಳು ಶುಚಿತ್ವಗೊಂಡಿದೆ. ಈವರೆಗೆ 30 ಲಕ್ಷಕ್ಕೂ ಅಧಿಕ ಸೇವಾಕರ್ತರು ಈ ಸ್ವಚ್ಛತಾ ಸೇವೆಯನ್ನು ಸಲ್ಲಿಸಿದ್ದಾರೆ.
ಈ ಕುರಿತಂತೆ ಸ್ವಚ್ಛ ಭಾರತ ಅಭಿಯಾನದ ಹರಿಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ವರದಿಯನ್ನು ಸಲ್ಲಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್. ಮಂಜುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.