ಬೆಳ್ತಂಗಡಿ: 75ನೇ ಸ್ವಾತಂತ್ರ್ಯೋತ್ಸವ ದಿನದಂದು ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಎಸ್.ಡಿ.ಪಿ.ಐ., ಪಿ.ಎಫ್.ಐ. ಮೊದಲಾದ ರಾಷ್ಟ್ರ ವಿರೋಧಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರ ಸಂಘಟನೆಗಳು ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನ ಸೌಧ ಆವರಣ ಹಾಗೂ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತ್ತಾಯ ಮಾತನಾಡಿ, ಹಿಂದೂ ಸಮಾಜದಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ಮತಾಂಧರಿಂದ ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್, ಗೋಹತ್ಯೆ, ಭೂಮಿ ಜಿಹಾದ್, ಶೈಕ್ಷಣಿಕ ಜಿಹಾದ್, ವ್ಯಾಪಾರ ಜಿಹಾದ್, ಆರ್ಥಿಕ ಜಿಹಾದ್ ಅದರ ಜತೆಗೆ ಈಗ ರಾಜಕಾರಣ, ಜಿಹಾದ್ ಶುರು ಮಾಡಿದ್ದಾರೆ. ಜಿಹಾದ್ ಹೆಸರಿನಲ್ಲಿ ವಿವಿಧ ಮುಖಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವ, ಶಾಂತಿ ಕದಡುವ, ಸಾಮರಸ್ಯಕ್ಕೆ ಧಕ್ಕೆ ತರುವ ಹುನ್ನಾರಗಳು ನಡೆಯುತ್ತಿದೆ. ಇದರ ವಿರುದ್ದ ಸಮಾಜ ಜಾಗೃತ ಆಗಬೇಕು. ಇನ್ನೊಂದೆಡೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಬಕದಲ್ಲಿ ರಾಷ್ಟ್ರ ದ್ರೋಹಿಗಳಿಂದ ಧಕ್ಕೆಯಾಗಿದೆ. ನಿಷೇಧಿತ ಸಂಘಟನೆಯ ಇನ್ನೊಂದು ಮುಖವಾಣಿಯಾಗಿ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವ ಸಂಘಟನೆಗಳು ಸ್ವಾತಂತ್ರ್ಯ ವೀರ ಸಾವರ್ಕರ್ ಭಾವಚಿತ್ರದ ಬದಲು ಹಿಂದೂ, ಕ್ರೈಸ್ತ ವಿರೋಧಿಯಾಗಿರುವ ದೇವಾಲಯಗಳನ್ನು ನಾಶ ಮಾಡಿದ, ಮತಾಂತರ ಮಾಡಿದ ಟಿಪ್ಪುವಿನ ಭಾವಚಿತ್ರ ಅಳವಡಿಸುವಂತೆ ರಥಕ್ಕೆ ಅಡ್ಡಿಪಡಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಇವರ ಹಿಂದಿರುವ ಕಾಣದ ಕೈಗಳಿಗೆ, ಪಾತಕಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಸಮಾಜ ಜಾಗೃತ ಆಗಬೇಕು. ಇಲಾಖೆ ಪಾಕಿಗಳನ್ನು ಪತ್ತೆ ಹಚ್ಚಬೇಕು. ನಾವೆಲ್ಲರೂ ದುಷ್ಟರನ್ನು ಶಿಕ್ಷಿಸಲು ಕುರುಕ್ಷೇತ್ರ ಯುದ್ದಕ್ಕೆ ಸಿದ್ದರಾಗಬೇಕು ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ ಮಾತಾನಾಡಿ, ಹಿಂದೂ ಸಮಾಜ ಕೈಕಟ್ಟಿ ಕುಳಿತಿಲ್ಲ. ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸಲು ನಮಗೂ ಗೊತ್ತಿದೆ. ಸ್ವಾತಂತ್ರ್ಯ ದಿನದಂದು ಅಶಾಂತಿ ಸೃಷ್ಟಿಸಲು ಹೊರಟಿರುವುದು ದೇಶದ್ರೋಹವಾಗಿದೆ. ಅಫ್ಘಾನಿಸ್ತಾನದಲ್ಲಿ ಮತಾಂಧವಾದಿಗಳಿಂದ ಹಿಂಸೆ, ಅರಾಜಕತೆ, ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ದೇಶದ ಯಾವನೇ ಒಬ್ಬ ಮುಸ್ಲಿಂಮರು ಧ್ವನಿ ಎತ್ತದೆ ಇರುವುದು ಸಂಶಯ ಮೂಡಿಸುತ್ತಿದೆ. ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವವರ ವಿರುದ್ದ ಸಂಬಂಧಪಟ್ಟವರು ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಕ್ರಮ ಜರುಗಿಸದಿದ್ದರೆ ಸೈನಿಕರ ರೀತಿಯಲ್ಲಿ ಯಾವುದೇ ತ್ಯಾಗ, ಬಲಿದಾನಕ್ಕೂ ಸಿದ್ದ ಎಂದು ಹೇಳಿದರು.
ಪ್ರತಿಭಟನಾ ಸಭೆಯ ನೇತೃತ್ವವನ್ನು ಧರ್ಮಜಾಗರಣಾ ದಕ್ಷಿಣ ಪ್ರಾಂತ ಪರಿಯೋಜನಾ ಪ್ರಮುಖ್ ದಿನಕರ ಅದೇಲು, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್, ಪ್ರಮುಖ್ ಜಗದೀಶ್ ನೆತ್ತರಕೆರೆ, ವಿಶ್ವ ಹಿಂದು ಪರಿಷತ್ ಬೆಳ್ತಂಗಡಿ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಉಪಾಧ್ಯಕ್ಷ ಶ್ರೀಧರ ಗುಡಿಗಾರ್, ಬಜರಂಗದಳ ಸಂಚಾಲಕ ಸಂತೋಷ್ ಅತ್ತಾಜೆ, ಸಹ ಸಂಚಾಲಕ ರಮೇಶ್ ಧರ್ಮಸ್ಥಳ, ಬಿಎಂಸ್ ತಾಲೂಕು ಅಧ್ಯಕ್ಷ ಉದಯ ಕುಮಾರ್ ಬಿ.ಕೆ., ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್, ವಕೀಲ ವಸಂತ ಮರಕಡ ಮೊದಲಾದವರು ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ದುರ್ಗಾವಾಹಿನಿ, ಮಾತೃಶಕ್ತಿ ಮೊದಲಾದ ಹಿಂದೂ ಪರಿವಾರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್.ಐ. ನಂದಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.