ಮೂಡುಕೋಡಿ: ಮಕ್ಕಳಿಗೆ ಸಧ್ಯ ಆನ್ ಲೈನ್ ಶಿಕ್ಷಣ ನಡೆಯುತ್ತಿದ್ದು, ವೇಣೂರು ಹೋಬಳಿಯ ಮೂಡುಕೋಡಿ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದ್ದು, ಸ್ಥಳೀಯ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಪೋಷಕರು ಚಿಂತಾಕ್ರಾಂತರಾಗಿದ್ದಾರೆ.
ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ-ತಡೆ ಎದುರಾಗಬಾರದೆಂದು ಸರಕಾರವು ಆನ್ಲೈನ್ ತರಗತಿಗಳನ್ನು ಆರಂಭಿಸಿದ್ದರೂ ಮಕ್ಕಳಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಹೊರಬರಲು ಅಸಾಧ್ಯವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಇಲ್ಲದ ಕಾರಣ ಮಕ್ಕಳು ಎದ್ದು- ಬಿದ್ದು, ಕಾಡು, ಗಿಡ- ಮರಗಳನ್ನದೆ ಕಲ್ಲು-ಮುಳ್ಳು ಬಂಡೆಗಳ ಮೇಲೆ ತರಗತಿಗಳಿಗೆ ಹಾಜರಾಗಿ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಿಯಾಗಿ ಧ್ವನಿ ಕೇಳಿಸದೆ ದೂರವಾಣಿ ಮೂಲಕ ಮಾತನಾಡಲೂ ಆಗದ ಮೂಡುಕೋಡಿಯ ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ತರಗತಿಗೆ ಹಾಜರಾಗಲು ಎಷ್ಟರ ಮಟ್ಟಿಗೆ ಸಾಧ್ಯವಾದೀತು? ಒಂದು ಲಿಂಕ್ ತೆರೆಯಲು ನೆಟ್ ವರ್ಕ್ ಸಮಸ್ಯೆಯಾದಾಗ ಅಥವಾ ಬೋಧನೆಯ ಮಧ್ಯೆ ಹಲವು ಬಾರಿ ಸಂಪರ್ಕ ಸಮಸ್ಯೆಯಾದಾಗ ಅನೇಕ ಶಬ್ದಗಳ ಗೊಂದಲದೊಂದಿಗೆ ಮಕ್ಕಳು ಪಾಠ ಕೇಳಿಸದೆ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂಬುದು ಪೋಷಕರ ಅಳಲು.
ಕೊರೋನಾ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ್ದರಿಂದ ಅನೇಕ ಜನರು ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರೂ ಮಕ್ಕಳ ಭವಿಷ್ಯಕ್ಕೋಸ್ಕರ ಮೊಬೈಲ್ ಫೋನ್ ಹಾಗೂ ಕರೆನ್ಸಿಗಾಗಿ ಹಣದ ದುಂದುವೆಚ್ಚ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೆಟ್ ವರ್ಕಿಗಾಗಿ ಮಕ್ಕಳು ಗುಡ್ಡ, ಮರ ಹತ್ತಿ ಪಾಠ ಕೇಳಬೇಕಾದ ಅನಿವಾರ್ಯ ಬಂದೊದಗಿದೆ. ಈ ಸಂದರ್ಭದಲ್ಲಿ ಮಕ್ಕಳು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡರೆ ಅಥವಾ ಜೀವಕ್ಕೆ ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ತಾಲೂಕಿನ ಅಧಿಕಾರಿಗಳು, ಶಿಕ್ಷಣ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶವಾದ ಮೂಡುಕೋಡಿಯ ಮೊಬೈಲ್ ನೆಟ್ವರ್ಕ್ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಲಿ ಎಂದು ಪೋಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.