ಬೆಳ್ತಂಗಡಿ: ಪ್ರಜಾಪ್ರಭುತ್ವದಲ್ಲಿ ಪಾರ್ಲಿಮೆಂಟ್ ಅಥವಾ ವಿಧಾನ ಸಭೆಯಲ್ಲಿ ಜನರ ಸಮಸ್ಯೆಗಳ ಕುರಿತು ಸ್ಪಂದಿಸುವ ಹಾಗೂ ಚರ್ಚೆ ಮಾಡಲು ಅವಕಾಶವಿದೆ. ಆದರೆ ಚರ್ಚೆಗೆ ಅವಕಾಶ ಇಲ್ಲದ ರೀತಿ ಪ್ರತಿಪಕ್ಷಗಳು ನಡೆದುಕೊಳ್ಳುವುದು ಅದು ಪ್ರಜಾಪ್ರಭುತ್ವಕ್ಕೆ ಅವರು ಮಾಡಿರುವ ಅವಮಾನ ಹಾಗೂ ಜನರಿಗೆ ಮಾಡಿರುವ ದ್ರೋಹ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಗಳಲ್ಲಿ ಚರ್ಚೆ ಮಾಡದೆ. ಎಲ್ಲೋ ದಾರಿಯಲ್ಲಿ ಬೀದಿಯಲ್ಲಿ ನಿಂತು ನನ್ನ ಜೊತೆಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕುವುದರಲ್ಲಿ ಯಾವುದೇ ಬಗೆಯ ಅರ್ಥವಿಲ್ಲ. ಯಾವ ವೇದಿಕೆಯಿದೆ, ಆ ವೇದಿಕೆಯನ್ನು ಉಪಯೋಗ ಮಾಡಿಕೊಂಡು ಅಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಲೋಕಸಭೆಯಲ್ಲಿ ವಿವಿಧ ರೀತಿಯ ಬಿಲ್‍ಗಳು ಚರ್ಚೆಗೆ ಬರುತ್ತಿವೆ. ಆ ಬಿಲ್‍ಗಳ ಕುರಿತು ಪ್ರತಿಪಕ್ಷ ಎಂಬ ಒಂದೇ ಕಾರಣಕ್ಕೆ ವಿರೋಧ ಮಾಡುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅವರಿಂದ ಆದ ಅಪಮಾನವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೊಸರಲ್ಲಿ ಕಲ್ಲು ಹುಡುಕುವವರಿಗೆ ನಾವು ಸಮಾಧಾನ ಹೇಳಲು ಆಗುವುದಿಲ್ಲ. ಮಾಡಿದ ಕೆಲಸವನ್ನು ಒಪ್ಪುವುದರಲ್ಲಿ ಯಾವುದೇ ಸಣ್ಣತನ ಆಗುವುದಿಲ್ಲ. ನಾವು ಹೇಳುತ್ತೇವೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲವೆಂದು. ಒಳ್ಳೆ ಕೆಲಸ ಮಾಡಿದಾಗ ಅಭಿವೃದ್ಧಿಯಲ್ಲಿ ರಾಜಕೀಯ ತರಬಾರದು. ಒಳ್ಳೆಯ ಕೆಲಸ ಮಾಡಿದಾಗ ಕನಿಷ್ಠ ಪಕ್ಷ ಒಳ್ಳೆಯ ಮಾತನ್ನಾದರೂ ಹೇಳುವುದನ್ನು ಬಿಟ್ಟು, ಅಭಿವೃದ್ಧಿಯ ವೇಗವನ್ನು ಕುಂಠಿತ ಮಾಡಲು ಸುಳ್ಳು ಆರೋಪಗಳನ್ನು ಮಾಡಬಾರದು ಎಂಬುದನ್ನು ಪ್ರತಿಪಕ್ಷಗಳಿಗೆ ಹೇಳುತ್ತೇನೆ. ಬೇರೆ ಪ್ರಶ್ನೆಗಳಿಗೆ ಉತ್ತರವಿಲ್ಲ, ಅಭಿವೃದ್ಧಿಯೊಂದೇ ನಮ್ಮ ಉತ್ತರ ಎಂದರು.
ಅನುದಾನ ಲೆಕ್ಕ ಕುರಿತು ಶಾಸಕ ವಸಂತ ಬಂಗೇರ ಅವರು ಶಾಸಕ ಹರೀಶ್ ಪೂಂಜ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮಾಜಿ ಶಾಸಕ ವಸಂತ ಬಂಗೇರ ಅವರು ಹಿರಿಯರು, ಅದು ಅವರು ಹೇಳುವುದಲ್ಲ ಅವರ ಸ್ವಂತದ ಸಲಹಾ ಸಮಿತಿಯಿದೆ. ಅದು ಅಷ್ಟು ಸರಿಯಾಗಿಲ್ಲ. ಹಾಗಾಗಿ ನಿದ್ದೆಯಲ್ಲಿದ್ದವನನ್ನು ಎಬ್ಬಿಸಬಹುದು, ನಿದ್ದೆ ಮಾಡಿದ ಹಾಗೆ ಮಾಡಿದ ಹಾಗೆ ನಟನೆ ಮಾಡಿದವರನ್ನು ಎಬ್ಬಿಸಲು ಸಾಧ್ಯವಿಲ್ಲ. ಅವರಿಗೆ ಬಹುಶಃ ಈ ಅಭಿವೃದ್ಧಿಯ, ಯಾವುದೇ ಶಾಸಕರಿರಲಿ ಅವರವರ ಅವಧಿಯಲ್ಲಿ ಕೆಲಸ ಮಾಡಿರುತ್ತಾರೆ. ಆದರೆ ಒಮ್ಮೆ, ಈ ಎರಡು ವರ್ಷದಲ್ಲಿ ಆದ ಅಭಿವೃದ್ಧಿಯನ್ನು ಯೋಚನೆ ಮಾಡಿ, ಅಲ್ಲೋ ಇಲ್ಲೋ ಸಣ್ಣ-ಪುಟ್ಟ ವಿಷಯಗಳನ್ನು ಹಿಡಿದುಕೊಂಡು ಅದನ್ನು ಮಾತಾನಾಡುವುದಕ್ಕಿಂತ ಅವರದೇ ಪಕ್ಷದ ನಾಯಕರು, ಯಾಕೆ ಹೇಳಿದರು?, ಶೋಕಾಸ್ ನೋಟಿಸ್ ಕೊಡುವ ಪರಿಸ್ಥಿತಿ ಆ ಪಕ್ಷಕ್ಕೆ ಯಾಕೆ ಬಂತು..? ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು ಎನ್ನುವಾಗ ಸಹಜವಾಗಿ ಹೇಳಬೇಕು. ಅವರು ಯಾವುದೆಲ್ಲಾ ಲೆಕ್ಕ ಕೇಳಿದ್ದಾರೆ. ಇದು ನಮ್ಮನ್ನು ಕಾಡಲು ಶುರುವಾಗಿದೆ, ಇವರಿಗೆ ಲೆಕ್ಕ ಕೊಟ್ಟು, ಪ್ರಯೋಜನವಿಲ್ಲ, ಇಲ್ಲ ಅವರಿಗೆ ಲೆಕ್ಕ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಥವಾ ಲೆಕ್ಕ ಅರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಉತ್ತರಿಸಿದರು.
ಡಬಲ್ ಇಂಜಿನ್ ಸರಕಾರ:
ಕರ್ನಾಟಕ, ದ.ಕ. ಜಿಲ್ಲೆ ಅಥವಾ ದೇಶದಲ್ಲಿ ನೂರಾರು ಯೋಜನೆಗಳ ಮೂಲಕ ಕ್ರಾಂತಿಕಾರಿ ಬದಲಾವಣೆ ಉಂಟಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿ 300ಕ್ಕೂ ಹೆಚ್ಚು ಯೋಜನೆಗಳನ್ನು ಬಿಜೆಪಿ ಸರಕಾರ ತಂದು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಸಫಲವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೊಸ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಜನತೆ ಇದನ್ನು ಸ್ವೀಕರಿಸಿದ್ದು ಸಕಾರಾತ್ಮಕ ಸಂಗತಿಗಳ ಮೇಲೆ 2014 ಹಾಗೂ 2019ರ ಚುನಾವಣೆಯನ್ನು ಎದುರಿಸಿದ್ದೇವೆ. ಅಧಿಕಾರದ ಜೊತೆಗೆ ದೇಶದಲ್ಲಿ ಜನಮನ್ನಣೆಯೂ ವಿಸ್ತಾರವಾಗಿದೆ. ಇದೀಗ ಡಬಲ್ ಇಂಜಿನ್ ಸರಕಾರದ ಮೂಲಕ ಅಭಿವೃದ್ಧಿ ಬಹಳ ವೇಗವಾಗಿ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರವಿದ್ದು ಹಿಂದೆಂದೂ ಕಾಣದಷ್ಟು ವೇಗವಾಗಿ ದೇಶದ ಹಳ್ಳಿ, ಹಳ್ಳಿಗಳು ಅಭಿವೃದ್ಧಿ ಹೊಂದುತ್ತಿವೆ ಎಂದರು.
ತಾಲೂಕಿನಲ್ಲಿ ಅಭಿವೃದ್ಧಿಯ ಶಕೆ:
ತಾಲೂಕಿನಲ್ಲಿ ಸಂಕಷ್ಟದ ನಡುವೆಯೂ ದಾಖಲೆ ಮಟ್ಟದ ಅಭೀವೃದ್ಧಿ ಕಾರ್ಯಗಳು ನಡೆದಿವೆ. ಶಾಸಕ ಹರೀಶ್ ಪೂಂಜ ತಮ್ಮ ಅಧಿಕಾರಾವಧಿಯಲ್ಲಿ ನೆರೆ, ಕೋವಿಡ್ ಸಂಕಷ್ಟವನ್ನು ಎದುರಿಸಿದರೂ ಅಭಿವೃದ್ಧಿಯ ವೇಗ ಮಾತ್ರ ಕುಂಠಿತವಾಗಿಲ್ಲ. ಮುಖ್ಯವಾಗಿ ನೆರೆ ಬಂದಿದ್ದ ಸಂದರ್ಭದಲ್ಲಿ ಯುವಕರು, ಸಂಘ-ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ಸಮಸ್ಯೆಗೊಳಗಾದವರಿಗೆ ಹೊಸ ಜೀವನ ನೀಡುವ ಕಾರ್ಯ ನಡೆಸಲಾಗಿದೆ.ನ ಪಶ್ಚಿಮ ವಾಹಿನಿ ಯೋಜನೆ ಮೂಲಕ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸುವ ದೂರಗಾಮಿ ಚಿಂತನೆ ನಡೆದಿದೆ. ವಿವಿಧೆಡೆ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಿ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. 28 ಎಕರೆಯಲ್ಲಿ ತಾಲೂಕಿನ ಕೇಂದ್ರ ಭಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗಿದ್ದು, ರಸ್ತೆ ಅಭಿವೃದ್ಧಿ ಕಾರ್ಯವೂ ನಡೆದಿದೆ. 100 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲು ವ್ಯವಸ್ಥೆ ರೂಪಿಸಲಾಗಿದೆ. ಒಂದು ರೀತಿಯಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳು ಅಧ್ಯಯನ ವಿಚಾರವಾಗುವ ರೀತಿ ಇದೆ ಎಂದು ತಿಳಿಸಿದರು.
ನೇರ ಹಳ್ಳಿಯ ಮನೆಗಳಿಗೆ ಸೌಲಭ್ಯ:
ಇದೀಗ ಕೇಂದ್ರ ಸರಕಾರದ ಹಾಗೂ ರಾಜ್ಯದ ಯೋಜನೆಗಳು ಹಳ್ಳಿ ಹಳ್ಳಿಯ ಜನರನ್ನು ನೇರವಾಗಿ ತಲುಪುತ್ತಿದೆ. ಜನಧನ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ನೀಡಿದಲ್ಲಿ ನೇರವಾಗಿ ಜನತೆ ಕುಳಿತಲ್ಲಿಗೆ ಹಣ ಜಮಾವಣೆಯಾಗುತ್ತಿದೆ. ಆಡಳಿತ ಯಂತ್ರದಲ್ಲಿ ಚುರುಕು ಮೂಡಿದ್ದು, ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿದೆ. ನೂರಾರು ಯೋಜನೆಗಳನ್ನು ಸರಕಾರ ತಂದಿದ್ದು, ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾಗಿವೆ. ಕೊರೋನಾ ಸಂಕಷ್ಟದ ಸ್ಥಿತಿಯಲ್ಲೂ 300ಕ್ಕೂ ಹೆಚ್ಚು ಯೊಜನೆಗಲು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವ ಮೂಲಕ ಬಡವರಿಗೆ ಸೌಲಭ್ಯವನ್ನು ನೇರವಾಗಿ ತಲುಪಿಸುವ ಕಾರ್ಯ ನಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಹಿರಿಯ ಮುಖಂಡ ಕುಶಾಲಪ್ಪ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.