ಪಿಲಿಗೂಡು: ಸ್ಥಳೀಯವಾಗಿ ಪಿಲಿಗೂಡಿನಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವಿದ್ದರೂ ಲಸಿಕೆ ವಿತರಣೆಗೆ ವೈದ್ಯಾಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ಸುಮಾರು 5 ಕೀ.ಮೀ. ದೂರದ ಪದ್ಮುಂಜಕ್ಕೆ ಅಲೆದಾಡಬೇಕಿದೆ. ಅಲ್ಲಿ ಲಸಿಕೆ ಲಭಿಸದಿದ್ದರೆ ದಿನಂಪ್ರತಿ ಒಟ್ಟು 10 ಕೀ.ಮೀ. ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಿಲಿಗೂಡು, ಉರುವಲು ಗ್ರಾಮದ ಜನತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಣಿಯೂರು ಆರೋಗ್ಯ ಕೇಂದ್ರದಲ್ಲಿ ಲಸಿಕೆ ವ್ಯವಸ್ಥೆ ಮಾಡಲಾಗಿತ್ತು, ಆದರೆ ಪಿಲಿಗೂಡು ಪರಿಸರದ ಜನತೆ ಸಮರ್ಪಕ ಮಾಹಿತಿ ಲಭಿಸದೆ, ಪದ್ಮುಂಜ ತಲುಪುವ ಸಂದರ್ಭ ತಡವಾಗಿ ಅಥವಾ ಟೋಕನ್ ಸಿಗದೆ ಲಸಿಕೆಯಿಂದ ವಂಚಿತರಾಗುತ್ತಿದ್ದರು. ಪಿಲಿಗೂಡು ಪರಿಸರದ ಜನತೆ ಲಸಿಕೆಗಾಗಿ ಪದ್ಮುಂಜದಲ್ಲಿರುವ ಕಣಿಯೂರು ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಹೋಗಿ ಬರಲು ಖಾಸಗಿ ವಾಹನ ಬಳಸಬೇಕಿದೆ, ಬಸ್ ಸೌಲಭ್ಯ ಬೇಕಿದ್ದಲ್ಲಿ ಕುಪ್ಪೆಟ್ಟಿಗೆ ತೆರಳಿ ಸುತ್ತಿ ಬಳಸಿ ಪ್ರಯಾಣ ಮಾಡಬೇಕಿದೆ. ಇಲ್ಲವಾದಲ್ಲಿ ದುಬಾರಿ ಹಣ ತೆತ್ತು ರಿಕ್ಷಾ ಅಥವಾ ಇತರೆ ವಾಹನಗಳಿಗೆ ತಿಳಿಸಿ ತೆರಳಬೇಕಿದೆ. ಇಷ್ಟಾದರೂ ಲಸಿಕೆ ಸಿಗುತ್ತದೆ ಎಂಬ ಭರವಸೆ ಇಲ್ಲ. ಹೆಚ್ಚು ಜನತೆ ಬಂದಲ್ಲಿ ಲಸಿಕೆ ಲಭಿಸುವುದೇ ಅನುಮಾನ. ಕೆಲವರು ಖಾಸಗಿ ವಾಹನಗಳ ಮೂಲಕ ಸುಮಾರು 4ರಿಂದ 6 ಬಾರಿ ತೆರಳಿ ಲಸಿಕೆ ಸಿಗದೆ ವಾಪಾಸಾದ ಘಟನೆಯೂ ನಡೆದಿದೆ. ಸ್ಥಳೀಯ ಮೊಗ್ರು, ಬಂದಾರು, ಉರುವಾಲು, ಕಣಿಯೂರು ಗ್ರಾಮಗಳ ಜನತೆಯೂ ಇದೇ ಆಸ್ಪತ್ರೆಯ ಲಸಿಕೆ ಅವಲಂಬಿಸಿದ್ದಾರೆ ಆದ್ದರಿಂದ ಲಸಿಕೆ ಹಂಚಿಕಯಲ್ಲಿ ಗೊಂದಲ ಉಂಟಾಗುತ್ತಿದೆ.
ಪಿಲಿಗೂಡಿನಲ್ಲಿ ಯಾಕಿಲ್ಲ…?:
ಆರಂಭದಲ್ಲಿ ಮಚ್ಚಿನ ವ್ಯಾಪ್ತಿಯ ಜನತೆಯೂ ಕಣಿಯೂರು, ಪದ್ಮುಂಜ ಆರೋಗ್ಯ ಕೇಂದ್ರವನ್ನೇ ಲಸಿಕೆಗೆ ಅವಲಂಬಿಸಿದ್ದರು. ಆದರೆ ಬಳಿಕ ಬಳ್ಳಮಂಜ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯ ಜನತೆ ಉತ್ತಮ ರೀತಿಯಲ್ಲಿ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಪಿಲಿಗೂಡಿನಲ್ಲಿರುವ ಸುಸಜ್ಜಿತ ಆಯುರ್ವೇದ ಚಿಕಿತ್ಸಾಲಯವನ್ನೂ ಲಸಿಕೆನೀಡಲು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ಯಾಕೆ ಬಳಸಿಕೊಳ್ಳುತ್ತಿಲ್ಲ…?? ಸ್ಥಳೀಯರು ದೂರದ ಪದ್ಮುಂಜಕ್ಕೆ ಓಡಾಡಬೇಕೇ…? ಪಿಲಿಗೂಡಿನಲ್ಲಿ ಲಸಿಕೆ ಆಯೋಜಿಸಲು ಏನು ಸಮಸ್ಯೆ…? ಪಿಲಿಗೂಡು ವ್ಯಾಪ್ತಿಯ ಜನತೆಯ ಕುರಿತು ಏಕೆ ಮಲತಾಯಿ ಧೋರಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ವೈದ್ಯಾಧಿಕಾರಿಗಳಿಂದ ಭರವಸೆ ಮಾತ್ರ:
ಕೋವಿಡ್ ಎರಡನೇ ಅಲೆಯ ಬಳಿಕ ಪದ್ಮುಂಜ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲು ಆರಂಭಿಸಿ 6 ತಿಂಗಳುಗಳೇ ಕಳೆದಿದೆ. ಆದರೆ ಪಿಲಿಗೂಡು ಚಿಕಿತ್ಸಾಲಯದಲ್ಲಿ ಒಮ್ಮೆಯೂ ಶಿಬಿರ ನಡೆದಿಲ್ಲ!. ಪಿಲಿಗೂಡು, ಉರುವಲು ವ್ಯಾಪ್ತಿಯ ಸಾರ್ವಜನಿಕರ ಬೇಡಿಕೆಗೆ ಒಮ್ಮೆಯೂ ವೈದ್ಯಾಧಿಕಾರಿಗಳು ಸ್ಪಂದಿಸಿಲ್ಲ. ಇತ್ತೀಚಿಗೆ ಕಣಿಯೂರಿನಲ್ಲಿ ಜನಜಂಗುಳಿ ಏರ್ಪಟ್ಟ ಸಂದರ್ಭದಲ್ಲೂ ಪಿಲಿಗೂಡು ಚಿಕಿತ್ಸಾಲಯದಲ್ಲಿ ಲಸಿಕೆ ನೀಡುವ ಭರವಸೆ ಲಭಿಸಿತ್ತು, ಬಳಿಕವೂ ಪಿಲಿಗೂಡಿನಲ್ಲಿ ಲಸಿಕೆ ಶಿಬಿರ ಆಯೋಜಿಸಲು ಮನವಿ ಮಾಡಿದರೂ ವೈದ್ಯರು ಮುಂದಿನ ದಿನಗಳಲ್ಲಿ ಪಿಲಿಗೂಡಿನಲ್ಲಿ ಶಿಬಿರ ಮಾಡುವ ಎಂಬ ಭರವಸೆ ಮಾತ್ರ ನೀಡುತ್ತಾರೆ. ಆದರೆ ಅನುಷ್ಠಾನ ಮಾತ್ರ ಸೊನ್ನೆ. ಇತ್ತ ಪಿಲಿಗೂಡು ಪರಿಸರದ ಜನತೆ ಲಸಿಕೆಗಾಗಿ ಕಾದು ಕುಳಿತದ್ದೇ ಬಂತು. ಈಗಲೂ ಸರ್ವೇ ಕಾರ್ಯ ನಡೆಸಿದಲ್ಲಿ ಹೆದ್ದಾರಿ ಬದಿಯ ಪಿಲಿಗೂಡು ವ್ಯಾಪ್ತಿಯ ಬಹುತೇಕರು ಮೂರನೇ ಅಲೆ ಆತಂಕದ ಸಂದರ್ಭದಲ್ಲೂ ಪ್ರಥಮ ಡೋಸ್ ಲಸಿಕೆಯನ್ನೂ ಪಡೆದಿಲ್ಲ ಎಂಬ ವಿಚಾರ ಬೆಳಕಿಗೆ ಬರುವಲ್ಲಿ ಅನುಮಾನವಿಲ್ಲ.
ತಳಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ…?
ಪ್ರಧಾನಿ ಹಾಗೂ ಕೇಂದ್ರ ಸರಕಾರ ಹಳ್ಳಿ ಹಳ್ಳಿಗಳ ಜನ ಸಾಮಾನ್ಯರಿಗೆ ಲಸಿಕೆ ಕೊಡಿಸಲು ಯೋಜನೆ ರೂಪಿಸಿದ್ದರೆ, ಇತ್ತ ತಳಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸೌಲಭ್ಯದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರಬುದ್ಧ ನಾಗರೀಕರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಇನ್ನಾದರೂ ಪಿಲಿಗೂಡು ವ್ಯಾಪ್ತಿಯ ಜನತೆಗೆ ಲಸಿಕೆ ಲಭಿಸುವಂತಾಗಲು, ಸ್ಥಳೀಯ ಚಿಕಿತ್ಸಾಲಯದಲ್ಲಿ ಲಸಿಕೆ ಶಿಬಿರ ಏರ್ಪಡಿಸಲು ಆರೋಗ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಆಶಯವಾಗಿದೆ.