ಬೆಳ್ತಂಗಡಿ: ರಸ ರಾಗ ಚಕ್ರವರ್ತಿ ಬಿರುದಾಂಕಿತ ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ(65) ಗುರುವಾರ ವಿಧಿವಶರಾಗಿದ್ದಾರೆ.
ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಯಕ್ಷ ಕಲಾ ಜೀವನ ಆರಂಭಿಸಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಕಲಾ ಸೇವೆ ಸಲ್ಲಿಸಿದ್ದರು.
ಆ ಕಾಲದ ಪ್ರಸಿದ್ಧ ಟೆಂಟ್ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು.ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಅತ್ಯದ್ಭುತ ರಾಗ ಸಂಚಾರದ ಮೂಲಕ ಕರುಣಾ ರಸದ ಪದ್ಯಗಳಿಗೆ ಸಾಟಿಯಿಲ್ಲದ ಭಾಗವತ ಎನಿಸಿಕೊಂಡಿದ್ದರು. ಎಡನೀರು ಮೇಳದಲ್ಲೂ ತಿರುಗಾಟ ನಡೆಸಿದ್ದರು. ವಿಶ್ರಾಂತ ಜೀವನ ನಡೆಸುತ್ತಿದ್ದ ಅಮ್ಮಣ್ಣಾಯರು ಭಾಗವತರಾಗಿ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ತನ್ನದೇ ಆದ ಗಾಯನ ಶೈಲಿಯಿಂದ ಮನೆಮಾತಾಗಿದ್ದ ಅಮ್ಮಣ್ಣಾಯರ ಅಗಲುವಿಕೆಗೆ ಗಣಾತೀಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.