ಬೆಳ್ತಂಗಡಿಯ ಸಂಯುಕ್ತ ಪ್ರಭುಗೆ 625 ಪೂರ್ಣಾಂಕ!: ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ತಾಲೂಕಿನ‌ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿಯ ಸಾಧನೆ

 

 

 

 

 

 

 

ಬೆಳ್ತಂಗಡಿ: ಕರ್ನಾಟಕ ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ. ಸಂಯುಕ್ತ ಡಿ. ಪ್ರಭು ಅವರು 625 ಅಂಕದಲ್ಲಿ 625 ಅಂಕ ಪಡೆದಿದ್ದಾರೆ. ಇವರು ಬೆಳ್ತಂಗಡಿ ವಿಘ್ನೇಶ್ ಮೆಡಿಕಲ್ ಮಾಲಕ ದಾಮೋದರ ಪ್ರಭು ಹಾಗೂ ಡಾ. ಅರ್ಚನಾ ಪ್ರಭು ದಂಪತಿಯ ಪುತ್ರಿಯಾಗಿದ್ದಾರೆ.

ಫಲಿತಾಂಶ ಕುರಿತು ಸಂಯುಕ್ತ ಪ್ರಭು ಅವರು ಮಾತನಾಡಿದ್ದು, “ಕೊರೊನಾ ಮಹಾಮಾರಿಯ ಸಂದರ್ಭದಲ್ಲೂ ಪರೀಕ್ಷೆ ಎದುರಿಸಿದ್ದು, ಫಲಿತಾಂಶ ಪ್ರಕಟವಾದಾಗ ಸಂತಸ ತಂದಿದೆ. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಅಧ್ಯಾಪಕ ವರ್ಗ ತುಂಬಾ ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಯಾವ ಹೊತ್ತಿನಲ್ಲೂ ಕರೆ ಮಾಡಿದರೂ ಶಿಕ್ಷಕರು ಯಾವುದೇ ವಿಷಯದಲ್ಲೂ ಸಂಶಯವಿದ್ದರೆ ಸೂಕ್ತ ವಿಚಾರ ತಿಳಿಸಿ ಪರಿಹಾರ ಸೂಚಿಸುತ್ತಿದ್ದರು. ಮನೆಯಲ್ಲಿ ಪೋಷಕರ ಪ್ರೋತ್ಸಾಹವೂ ಇತ್ತು. ಎಲ್ಲರಿಗೂ ಅಭಾರಿ” ಎಂದರು.

ಸಂಯುಕ್ತ ಪ್ರಭು ತಾಯಿ ಡಾ. ಅರ್ಚನ ಪ್ರಭು ಅವರು ತಮ್ಮ ಮಗಳ ಸಾಧನೆ ಕುರಿತು ಮಾತನಾಡಿದ್ದು, “ಮಗಳ ಸಾಧನೆಗೆ ತುಂಬಾ ಖುಷಿಯಾಗುತ್ತಿದೆ. ಅವಳ ಶ್ರಮಕ್ಕೆ ಯಶಸ್ಸು ಸಿಕ್ಕಿದೆ. ಬೆಳಗ್ಗೆ 4 ಗಂಟೆಗೇ ಎದ್ದು ಅಭ್ಯಾಸದಲ್ಲಿ ನಿರತಳಾಗುತ್ತಿದ್ದಳು. ಕೊರೋನಾದಿಂದ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಅನುಮಾನವಿದ್ದರೂ ಈಕೆ ಅಭ್ಯಾಸ ನಿಲ್ಲಿಸಿರಲಿಲ್ಲ. ಆನ್ ಲೈನ್ ಕ್ಲಾಸ್ , ರೆಗ್ಯೂಲರ್‌ ಕ್ಲಾಸ್ ತಪ್ಪಿಸದೆ ಪರಿಶ್ರಮದೊಂದಿಗೆ ಪ್ರಯತ್ನ‌ ಪಟ್ಟಿದ್ದಾಳೆ. ಅವಳ ಶ್ರಮಕ್ಕೆ ಉತ್ತಮ ಫಲಿತಾಂಶ ಬಂದಿದೆ. ಡ್ರಾಯಿಂಗ್ ಹಾಗೂ ಕ್ರಾಫ್ಟ್ ಈಕೆಯ ಪಠ್ಯೇತರ ಚಟುವಟಿಕೆ ಹವ್ಯಾಸವಾಗಿದೆ” ಎಂದರು.

error: Content is protected !!