ಧರ್ಮಸ್ಥಳ ಲಕ್ಷದೀಪೋತ್ಸವ,ಸಹಸ್ರಾರು ಭಕ್ತರಿಂದ ಪಾದಯಾತ್ರೆ: ಉಜಿರೆಯಲ್ಲಿ ನರ್ಸಿಂಗ್ ಕಾಲೇಜು,ಸೇರಿದಂತೆ  ಕೃಷಿ ಕಾಲೇಜು ವೀರೇಂದ್ರ ಹೆಗ್ಗಡೆ ಘೋಷಣೆ:

 

 

 

ಬೆಳ್ತಂಗಡಿ: ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ ಕಾಲೇಜು ಸ್ಫಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.
ಲಕ್ಷದೀಪೋತ್ಸವ ಪ್ರಾರಂಭದ ದಿನವಾದ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.
ತನ್ನ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಭಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತೋರುವ ಪ್ರೀತಿ-ವಿಶ್ವಾಸ, ಭಕ್ತಿ, ಶ್ರದ್ಧೆ, ವಿಶ್ವಾಸ ಮತ್ತು ಗೌರವ ಹಾಗೂ “ನಾವೆಲ್ಲರೂ ಸದಾ ನಿಮ್ಮ ಜೊತೆ ಇದ್ದೇವೆ” ಎಂದು ನೀಡುವ ಭರವಸೆ ಮತ್ತು ವಿಶ್ವಾಸ ತನಗೆ ಹೆಚ್ಚಿನ ಸೇವಾ ಕಾರ್ಯ ಮಾಡಲು ಉತ್ಸಾಹ, ಪ್ರೇರಣೆ ಮತ್ತು ನವ ಚೈತನ್ಯ ನೀಡುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ಜನರಲ್ಲಿ ಅನೇಕ ಸಂದೇಹಗಳು, ಸಂಶಯಗಳು ಮೂಡಿಬಂದು ಅನಾವಶ್ಯಕ ಅಪಾದನೆಗಳು ಕೇಳಿ ಬರುತ್ತಿವೆ. ಆದರೆ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಎಲ್ಲಾ ಭಕ್ತರ ಪ್ರೀತಿ-ವಿಶ್ವಾಸದಿಂದ ಸರ್ವ ಆಪಾದನೆಗಳೂ ನಿವಾರಣೆಯಾಗಿ ತಾನು ಸಂತೋಷ ಮತ್ತು ತೃಪ್ತಿಯಿಂದ ಇದ್ದೇನೆ ಎಂದು ಅವರು ಹೇಳಿದರು.
ಪಾದಯಾತ್ರಿಯು ಲಕ್ಷದೀಪೋತ್ಸವದ ಸಂಪ್ರದಾಯವಾಗಿ ಬೆಳೆದುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಲ್ಲರಿಗೂ ಸನ್ಮಂಗಳವಾಗಿ ಲೋಕಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬದಲಾದ ಇಂದಿನ ಭಾರತದಲ್ಲಿ ನಮ್ಮತನವನ್ನು ಗುರುತಿಸಿ ಉಳಿಸಿಕೊಳ್ಳಲು ಸಾಮೂಹಿಕವಾಗಿ ಭಜನೆ, ಭೋಜನ, ಮಾತೃಭಾಷೆಯ ಬಳಕೆ, ಸಾತ್ವಿಕ ಉಡುಪುಗಳನ್ನು ಧರಿಸುವುದು. ತೀರ್ಥಯಾತ್ರೆ, ಪಾದಯಾತ್ರೆಯಂತಹ ಸತ್ಸಂಪ್ರದಾಯ ಬೆಳೆಸಿಕೊಂಡಾಗ ಸಭ್ಯ, ಸುಸಂಸ್ಖೃತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಹೆಗ್ಗಡೆಯವರೇ ಸೂಕ್ತ ಸ್ಫೂರ್ತಿ ಹಾಗೂ ಪ್ರೇರಣೆ ನೀಡುವ ಆದರ್ಶ ಮಾರ್ಗದರ್ಶಕರು ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಹರೀಶ್ ಪೂಂಜ ಮಾತನಾಡಿ, ತಾನು ಪ್ರತಿವರ್ಷ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದಾಗಿ ಸಂತೋಷ ವ್ಯಕ್ತಪಡಿಸಿದರು. ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಧಾರ್ಮಿಕ ಸಂಸ್ಥೆಯು ಸಾಮಾಜಿಕ ಬದ್ಧತೆಯೊಂದಿಗೆ ಲೋಕಕಲ್ಯಾಣಕ್ಕಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಹೆಗ್ಗಡೆಯವರು ವಿಶ್ವಕ್ಕೆ ಮಾದರಿ ವ್ಯಕ್ತಿ ಎಂದು ಬಣ್ಣಿಸಿದರು.
ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆಯವರ ಕುಟುಂಬವರ್ಗದವರು, ಸೋನಿಯಾಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ..ಒ. ಅನಿಲ್ ಕುಮಾರ್,ಉದ್ಯಮಿ ಶಶಿಧರ್ ಶೆಟ್ಟಿ ,ಸೇರಿದಂತೆ ಇನ್ನಿತರ ಗಣ್ಯರು  ಉಪಸ್ಥಿತರಿದ್ದರು.

ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೆಗ್ಗಡೆಯವರಿಗೆ ನೀಡಿ ಶುಭ ಹಾರೈಸಿದರು.

ಉಜಿರೆಯ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!