ಬೆಳ್ತಂಗಡಿ: ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಬೆಳಗಾವಿ ಮೂಲದ ವ್ಯಕ್ತಿಯನ್ನು ಬಂಧಿಸಿದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣ ಬಳಿ ನಡೆದಿದೆ.
ಬೆಳಗಾವಿಯಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿ, ಬಸ್ ನಿಲ್ದಾಣದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿದಳದ ದಾಳಿ ಮಾಡಲಾಗಿದೆ. ಜಿಂಕೆ ಚರ್ಮ ಮಾರಾಟ ಮಾಡಲು ಗಿರಾಕಿಗಾಗಿ ಕಾಯುತ್ತಿದ್ದ ಆರೋಪದಲ್ಲಿ ಬೆಳಗಾವಿಯ ಹನುಮಂತ(31) ಎಂಬ ವ್ಯಕ್ತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ದಾಳಿ ಸಂದರ್ಭ ಲಕ್ಷಾಂತರ ರೂ. ಮೌಲ್ಯದ ಜಿಂಕೆ ಚರ್ಮ ವಶಕ್ಕೆ ಪಡೆಯಲಾಗಿದೆ.
ಪುತ್ತೂರು ಅರಣ್ಯ ಸಂಚಾರಿದಳದ ಎಸ್.ಐ. ಜಾನಕಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ ಕುಮಾರ್, ಸಂತೋಷ್ ತಂಡದಲ್ಲಿದ್ದರು.