ಬೆಳ್ತಂಗಡಿ ಕಳಿಯ ಗ್ರಾಮ 14 ಮಂದಿಗೆ ಕೊರೊನಾ ಪಾಸಿಟಿವ್: ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಾಜೆ ಎಂಬಲ್ಲಿ ಹದಿನಾಲ್ಕು ಮಂದಿಗೆ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಪ್ರಿನ್ಸಿಪಾಲ್ ಜಿಲ್ಲಾ ತರಬೇತಿ ಕೇಂದ್ರ ಕೋವಿಡ್ ನೋಡಲ್ ಅಧಿಕಾರಿ ಡಾ.ಆಶೋಕ್ ಮತ್ತು ಜಿಲ್ಲಾ ಸರ್ವೇವೀಕ್ಷಾಣಾಧಿಕಾರಿ ಡಾ.ಜಗದೀಶ್ ಹಾಗೂ ಅವರ ತಂಡ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಳಿಯ ಗ್ರಾಮದ ಪೆರಾಜೆ ನಿವಾಸಿಯೊಬ್ಬರು ಕೊರೊನಾ ಸೋಂಕು ತಗುಲಿ ಮೃತರಾಗಿದ್ದು, ಅವರ ಮನೆಯವರ ಹಾಗೂ ಸಂಬಂಧಿಕರ ಕೋವಿಡ್ ಟೆಸ್ಟ್ ಮಾಡಿಸಿದಾಗ ಮೃತರ ಸಂಪರ್ಕದಲ್ಲಿದ್ದ ಹದಿನಾಲ್ಕು ಮಂದಿಗೆ ಪಾಸಿಟಿವ್ ಬಂದಿದೆ.

ಮೃತರ ಮನೆಯವರಿಗೆ ಮತ್ತು ಹತ್ತಿರದ ಸಂಬಂಧಿಕರ 20 ಕ್ಕೂ ಹೆಚ್ಚು ಜನರ ಗಂಟಲು ದ್ರವದ ಪರೀಕ್ಷೆಯನ್ನು ಜು.28 ರಂದು ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷ ಕಾರ್ಯಕರ್ತೆ ಸಿಬ್ಬಂದಿಗಳು ನಡೆಸಿದ್ದರು.

ಈ ಪೈಕಿ ಮೃತರ ಮನೆಯವರು ಸೇರಿದಂತೆ 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಕಂಡು ಬಂದಿದೆ.

ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಸ್ಥಳೀಯ ಪ್ರದೇಶದಲ್ಲಿ ಸೀಲ್ ಡೌನ್ ಮಾಡುವಂತೆ ಕಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು. ಹತ್ತಿರದ ಮನೆಯ ಸದಸ್ಯರ ಗಂಟಲು ದ್ರವದ ಪರೀಕ್ಷೆ ನಡೆಸಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.

ನೆರೆ ರಾಜ್ಯದಲ್ಲಿ ಕೊರೊನಾ ಸೋಂಕು ವಿಪರೀತವಾಗಿದ್ದು, ಹೊರ ಜಿಲ್ಲೆ, ರಾಜ್ಯದಿಂದ ಬರುವ ಜನರನ್ನು ಕಡ್ಡಾಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸ್ಥಳೀಯವಾಗಿ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸ ಬೇಕು. ಅಡ್ಡಿ ಪಡಿಸುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸಂಜತ್ , ಡಾ.‌ಅಭಿಷೇಕ್, ಹಿರಿಯ ಸುರಕ್ಷ ಸಹಾಯಕಿ ಪ್ರೀಯಾ, ಕಿರಿಯ ಆರೋಗ್ಯ ಸಹಾಯಕಿ ಶಕುಂತಲಾ, ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಕೆ,ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞ ಕೆ., ,ನ್ಯಾಯತರ್ಫು ಗ್ರಾಮ ಬೀಟ್ ಪೊಲೀಸ್ ಕಿರಣ್ ನಾಯ್ಕ ಎಸ್. ,ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್. ಮತ್ತು ಪಂಚಾಯಿತಿ ಸಿಬ್ಬಂದಿ ರವಿ ಇದ್ದರು.

error: Content is protected !!