ಬೆಳ್ತಂಗಡಿ: ವನ ಸಂರಕ್ಷಣೆ ಮಾಡುವ ಮೂಲಕ ಪ್ರಾಕೃತಿಕ ಸಮತೋಲನ ಕಾಪಾಡುವ ಕೆಲಸ ನಾವೆಲ್ಲ ಸೇರಿ ಮಾಡಬೇಕು. ಈ ಭೂಮಿಯನ್ನು ನಾವು ನಮ್ಮ ಹಿರಿಯರಿಂದ ಲೀಸ್ ಗೆ ಪಡೆದಿದ್ದು, ಇದನ್ನು ರಕ್ಷಿಸಿ, ಬೆಳೆಸಿ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಬಿಟ್ಟುಕೊಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.ಅವರು ಗಡಾಯಿಕಲ್ಲು(ನರಸಿಂಹ ಗಢ) ಸಮೀಪದ ಕೂಡೇಲು ಬಳಿ ‘ಬದುಕು ಕಟ್ಟೋಣ ಬನ್ನಿ ತಂಡ’ ಹಾಗೂ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ “ವೃಕ್ಷ ಯಜ್ಞ” ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ಕಾಡಿನಲ್ಲಿ ಗಿಡ ನೆಡುವ ಅಗತ್ಯ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಇದು ನಮಗೆ ಎಚ್ಚರಿಕೆಯ ಕರೆಗಂಟೆ. ವಿದೇಶಗಳಲ್ಲಿ ಕಾಡನ್ನು ರಕ್ಷಿಸುತ್ತಾರೆ. ಅದರೆ ನಮ್ಮಲ್ಲಿ ಕಾಡನ್ನು ನಾಶ ಪಡಿಸುತಿದ್ದೇವೆ. ಇಲ್ಲಿ ಕಾಡು ನೋಡಬೇಕಾದರೆ ಎಲ್ಲಿ ಹೋಗಬೇಕು ಎಂಬುವುದೇ ತಿಳಿಯುವುದಿಲ್ಲ. ಇಲ್ಲಿ ದೊಡ್ಡ ಮರಗಳೇ ಕಾಣುತ್ತಿಲ್ಲ, ಈ ಸಂದರ್ಭಗಳಲ್ಲಿ ವನ ಸಂರಕ್ಷಣೆ ಪ್ರಕೃತಿಯ ಸಮತೋಲನ ಮಾಡುವ ಜವಾಬ್ದಾರಿ ಹೆಚ್ಚಿದೆ. ಪ್ರಕೃತಿ ಸಮತೋಲನ ಮಾಡದಿದ್ದರೆ ಏನಾಗುತ್ತದೆ ಎಂಬುವುದಕ್ಕೆ ಈಗಾಗಲೇ ಪ್ರಕೃತಿಯಲ್ಲಿ ನಡೆಯತ್ತಿರುವ ಅನಾಹುತಗಳೇ ಸಾಕ್ಷಿ. ಈ ನಿಟ್ಟಿನಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಉದಾತ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ನಮ್ಮ ಪರಿಸರದ ಸುತ್ತಮುತ್ತ ಹೆಚ್ಚಾಗಿ ಅರ್ಥಿಕವಾಗಿ ಲಾಭ ಕೊಡುವ ಮರಗಳನ್ನೇ ಹೆಚ್ಚಾಗಿ ಬೆಳೆಯುತ್ತೇವೆ, ಇದು ಅರ್ಥಿಕವಾಗಿ ಲಾಭ ತಂದು ಕೊಡಬಹುದು ಹೊರತು ಆಹಾರ ನೀಡುವುದಿಲ್ಲ. ಅದ್ದರಿಂದ ಅರಣ್ಯ ಇಲಾಖೆ ಈಗಾಗಲೇ ಹಣ್ಣು ಹಂಪಲಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಇದರಿಂದ ಕಾಡು ಪ್ರಾಣಿಗಳಿಗೆ ಆಹಾರ ದೊರಕಲಿ, ಕಾಡಿನಲ್ಲಿ ಆಹಾರ ಇಲ್ಲದೆ ಇರುವುದರಿಂದ ಕೃಷಿ ತೋಟಕ್ಕೆ ಪ್ರಾಣಿಗಳು ಬರುತ್ತವೆ ನಮಗೆ ತೊಂದರೆಗಳನ್ನು ನೀಡುತ್ತವೆ. ಅದ್ದರಿಂದ ನಾವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈ ಹಣ್ಣುಗಳ ಗಿಡ ನೆಡುವ ಕಾರ್ಯ ರಾಜ್ಯಾದ್ಯಂತ ಪ್ರಾರಂಭಿಸಲು ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಅರಣ್ಯ ಇಲಾಖೆಗೆ ಮಾಡಿದ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ರಾಷ್ಟ್ರದೆಲ್ಲೆಡೆ ನಡೆಯಬೇಕಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ,
ನರಸಿಂಹ ಗಡದ ತಪ್ಪಲಿನಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷಿ ಯೋಜನೆ ಇಲ್ಲಿ ಅನುಷ್ಠಾನವಾಗುತ್ತಿರುವುದು ಸಂತೋಷವಾಗುತ್ತಿದೆ. ಕೃಷಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಮನಗಂಡು ಹೆಗ್ಗಡೆಯವರು, ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಕೃಷಿಕರಿಗೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆ ದೂರ ಮಾಡಲು ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಕಾರ್ಯಕ್ರಮ ಅರಣ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಿದರೆ ಕೃಷಿಕರಿಗೆ ಅನುಕೂಲವಾಗಲಿದೆ ಎಂಬ ಪತ್ರ ಬರೆದಿದ್ದರು. ತಕ್ಷಣ ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಹಲವು ಹೆಕ್ಟೇರ್ ಅರಣ್ಯಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಈಗಾಗಲೇ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಹಲವಾರು ಯೋಜನೆಗಳಿಗೆ ಸಾವಿರಾರು ಕೋಟಿ ಹಣವನ್ನು ವಿನಿಯೋಗಿಸುತ್ತದೆ. ಅದರೆ ವೀರೇಂದ್ರ ಹೆಗ್ಗಡೆಯವರ ಈ ಯೋಜನೆಯನ್ನು ರಾಷ್ಟ್ರದಾದ್ಯಂತ ಸರ್ಕಾರ ಅನುಷ್ಠಾನಗೊಳಿಸಿದರೆ ಕಾಡು ಪ್ರಾಣಿಗಳ ಹಾವಳಿ ಕೃಷಿಕರಿಗೆ ಆಗದಂತೆ ತಡೆಗಟ್ಟಲು ಸಾಧ್ಯವಾಗಬಹುದು ಎಂದರು.
“ವೃಕ್ಷ ಯಜ್ಞ” ಕಾರ್ಯಕ್ರಮದ ಮೂಲಕ ಸಾವಿರಾರು ಹಣ್ಣಿನ ಗಿಡಗಳನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಒದಗಿಸಿ ಕೃಷಿಕರಿಗೆ ಕಾಡು ಪ್ರಾಣಿಗಳಿಂದ ಆಗುವ ತೊಂದರೆ ದೂರ ಮಾಡಲು ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಸಂಸ್ಥೆ ಹಮ್ಮಿಕೊಂಡ ಈ ಕಾರ್ಯಕ್ರಮ ಶ್ಲಾಘನೀಯ ಅದೇ ರೀತಿ ಗಿಡ ಮರಗಳನ್ನು ಪೋಷಿಸಿ ರಕ್ಷಿಸುವ ಕೆಲಸ ಸ್ಥಳೀಯರದ್ದಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮಾತನಾಡಿ
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಯಾವುದೇ ಯೋಜನೆಯ ಕಲ್ಪನೆಯನ್ನು ಮಾಡಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ. ಬದುಕು ಕಟ್ಟೋಣ ಬನ್ನಿ ತಂಡದ ರಾಮ ಲಕ್ಷ್ಮಣರಾದ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರು ಎಲ್ಲ ಕಲ್ಪನೆಯನ್ನು ಅದನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬಹುದು ಅವರದಂತಹ ಸಂಘಟನಾತ್ಮಕ ಸಾಮರ್ಥ್ಯ ಮತ್ತು ಕಲ್ಪನೆಯ ಆಧಾರದಲ್ಲಿ ಬೇರೆ ಬೇರೆ ರೀತಿಯಲ್ಲಿ ನಮ್ಮ ತಾಲೂಕಿನಲ್ಲಿ ಅವರು ಯುವಕರನ್ನು ಸೇರಿಸಿ ಕಾರ್ಯಕ್ರಮ ಮಾಡುತಿದ್ದಾರೆ. ವಿಶೇಷವಾಗಿ ಪೂಜ್ಯ ಹೆಗ್ಗಡೆಯವರ ಯೋಚನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವಂತಹ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿರುವ ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಶಾಸಕನ ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ಯೋಜನೆಗಳು ಫಲ ಕೊಡುವುದು ಜನರ ಭಾಗವಹಿಸುವಿಕೆಯಿಂದ, ಎಷ್ಟೋ ಯೋಜನೆಗಳು ಸರ್ಕಾರದ ಕಡೆಯಿಂದ ಬರುತ್ತವೆ ಹೋಗುತ್ತವೆ. ಅದರೆ ಯಾವ ದಿನ ಪಂಚಾಯತ್, ಊರಿನ ಜನ ಈ ಯೋಜನೆ ನಮ್ಮದು ಎನ್ನುವ ರೀತಿಯಲ್ಲಿ ಸ್ವೀಕರಿಸಿ ಅದನ್ನು ತರುವಂತಹ ದೃಷ್ಟಿಯಲ್ಲಿ ಪ್ರಯತ್ನ ಪಡುತ್ತಾರೆ ಅವಾಗ ಖಂಡಿತವಾಗಿ ಯಶಸ್ವಿಯಾಗುತ್ತದೆ. ಹೆಗ್ಗಡೆಯವರ ಉಪಸ್ಥಿಯಲ್ಲಿ ನಮ್ಮೆಲ್ಲರ ಪ್ರಯತ್ನದ ಕಾರಣಕ್ಕೆ ಒಂದು ಯೋಚನೆ, ಯೋಜನೆಯನ್ನು ಹಾಕಿಕೊಂಡಿದ್ದೇವೆ ಆ ಕಲ್ಷನೆ ರಾಷ್ಟ್ರಮಟ್ಟದಲ್ಲಿ ತಲುಪುವಲ್ಲಿ ಸಂಶಯವಿಲ್ಲ ಎಂದರು.
ತುಳು ರಂಗ ಭೂಮಿಯ ಖ್ಯಾತ ಹಾಸ್ಯ ನಟ ಅರವಿಂದ ಬೋಳಾರ್ ಕಾರ್ಯಕ್ರಮದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ಪಡುವೆಟ್ನಾಯ, ರಾಜೇಶ್ ಪೈ ಉಜಿರೆ, ಬೆಳ್ತಂಗಡಿ ಅರಣ್ಯ ಇಲಾಖೆಯ ರೇಂಜ್ ತ್ಯಾಗರಾಜ್, ಎ.ವಿ. ಶೆಟ್ಟಿ, ಧರ್ಮಸ್ಥಳ ಪ್ರಗತಿ ಬಂಧು ತಂಡ, ಶೌರ್ಯ ವಿಪತ್ತು ತಂಡ, ರೋಟರಿ ಕ್ಲಬ್ ಸದಸ್ಯರು, ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿ, ಲಾಯಿಲ ಮತ್ತು ನಡ ಗ್ರಾಮ ಪಂಚಾಯತ್ ಸದಸ್ಯರುಗಳು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಕೂಡೆಲು ಸುತ್ತಮುತ್ತ 400 ಮಂದಿಯಿಂದ 1000 ಕ್ಕಿಂತಲೂ ಅಧಿಕ ಹಣ್ಣುಗಳ ಗಿಡಗಳನ್ನು ನೆಡಲಾಯಿತು.